ರಾಷ್ಟ್ರೀಯ

ಏರುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ದರ

Pinterest LinkedIn Tumblr

ನವದೆಹಲಿ: ಕಳೆದ 10 ದಿನಗಳಿಂದ ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 53 ಪೈಸೆ ಮತ್ತು ಡೀಸೆಲ್ ದರದಲ್ಲಿ 56 ಪೈಸೆ ಹೆಚ್ಚಳವಾಗಿದೆ.

ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಪ್ರತೀ ಲೀಟರ್ ಪೆಟ್ರೋಲ್‌ ದರದಲ್ಲಿ 53 ಪೈಸೆ ಮತ್ತು ಡೀಸೆಲ್ ದರದಲ್ಲಿ 56 ಪೈಸೆ ಹೆಚ್ಚಳವಾಗಿದೆ. ಆ ಮೂಲಕ ಪೆಟ್ರೋಲ್ ದರ ಪ್ರತೀ ಲೀಟರ್ ಗೆ 83.22 ರೂ ಗಳಾಗಿದ್ದು, ಡೀಸೆಲ್‌ ದರ 75.03 ರೂ ಗೆ ಏರಿಕೆಯಾಗಿದೆ.

ಅಂತೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 80.59 ರೂ., ಮತ್ತು ಡೀಸೆಲ್‌ ದರ 72.70 ರೂ.ಗೆ ಏರಿಕೆಯಾಗಿದೆ. ಅತ್ತ ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 83.47 ರೂ (50 ಪೈಸೆ ಹೆಚ್ಚಳ) ಮತ್ತು ಡೀಸೆಲ್ ಬೆಲೆ 75.54 ರೂ. (54 ಪೈಸೆ ಹೆಚ್ಚಳ) ಗಳಾಗಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದಿನ ಪೆಟ್ರೋಲ್‌ ದರ 87.98 ರೂ, (50 ಪೈಸೆ ಹೆಚ್ಚಳ), ಡೀಸೆಲ್ ಬೆಲೆ 77.17 ರೂ (57 ಪೈಸೆ ಹೆಚ್ಚಳ) ಆಗಿದೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 83.76 ರೂ., (54 ಪೈಸೆ ಹೆಚ್ಚಳ), ಡೀಸೆಲ್‌ ಬೆಲೆ 76.84 ರೂ. (56 ಪೈಸೆ ಏರಿಕೆ) ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 4,883 ರೂ (73 ರೂ ಇಳಿಕೆ) ಇದೆ.

ಇನ್ನು ದಿನೇ ದಿನೆೇ ಗಗನಕ್ಕೇರುತ್ತಿರುವ ಇಂಧನ ಬೆಲೆಯಿಂದಾಗಿ ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದ್ದು, ಪ್ರಾಥಮಿಕವಾಗಿ ಇಂಧನವನ್ನು ಕೃಷಿ ಉತ್ಪನ್ನಗಳು ಒಳಗೊಂಡಂತೆ ಹೆಚ್ಚಿನ ಸರಕು ಸಾಗಣೆಗೆ ಬಳಸಲಾಗುತ್ತಿದೆ. 15 ದಿನಗಳ ಸರಾಸರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇನ್ನು ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ್ದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು, ಭಾರತೀಯ ರೂಪಾಯಿ ಡಾಲರ್ಸ್‌ ಎದುರು ಕುಸಿಯುತ್ತಿರುವ ಹಿನ್ನೆಲೆ ಸೇರಿದಂತೆ ಇಂಧನ ಪೂರೈಕೆಯಲ್ಲಿ ಉಂಟಾಗುತ್ತಿರುವ ಅಡೆತಡೆಗಳಿಂದಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.