ರಾಷ್ಟ್ರೀಯ

ಕೇಂದ್ರ ಸರಕಾರದ 10 ಜಂಟಿ ಕಾರ್ಯದರ್ಶಿ ಹುದ್ದೆಗೆ 6000 ಖಾಸಗಿ ತಜ್ಞರಿಂದ ಅರ್ಜಿ

Pinterest LinkedIn Tumblr


ಹೊಸದಿಲ್ಲಿ: ಆಡಳಿತ ವ್ಯವಸ್ಥೆಯಲ್ಲಿ ಖಾಸಗಿ ವಲಯದ ವಿಶೇಷಜ್ಞರು, ಪ್ರತಿಭಾವಂತರಿಗೆ ಅವಕಾಶ ನೀಡಲು ಮೋದಿ ಸರಕಾರ ಆರಂಭಿಸಿರುವ ಪಾಶ್ರ್ವ ನೇಮಕಾತಿ ಯೋಜನೆ ಭಾರಿ ಆಕರ್ಷಣೆಗೆ ಒಳಗಾಗಿದೆ. ಕೇಂದ್ರ ಸರಕಾರ ಇತ್ತೀಚೆಗೆ ಜಂಟಿ ಕಾರ್ಯದರ್ಶಿಯ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 6000ಕ್ಕೂ ಅಧಿಕ ಅಭ್ಯರ್ಥಿಗಳು ಆಸಕ್ತಿ ತೋರಿಸಿ ಅರ್ಜಿ ಹಾಕಿದ್ದಾರೆ.

ಸಿಬ್ಬಂದಿ ನೇಮಕ ಸಚಿವಾಲಯವು ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, 6077 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಇಲಾಖೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 30 ಕೊನೆಯ ದಿನವಾಗಿತ್ತು. ನಿರ್ದಿಷ್ಟ ವಿಭಾಗದ ಒಂದು ಹುದ್ದೆಗೆ ಗರಿಷ್ಠ 1,100 ಅರ್ಜಿಗಳು ಬಂದಿದ್ದರೆ, ಅತಿ ಕಡಿಮೆ ಎಂದರೆ 290. ಇಲಾಖೆಯು ಇದೀಗ ಮೊದಲ ಹಂತದ ಅರ್ಜಿ ಪರಿಶೀಲನೆ, ಪರಿಷ್ಕರಣೆ ಮತ್ತು ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ಯಾಕೆ ಈ ಕ್ರಮ?: ಕಾರ್ಯದರ್ಶಿಗಳ ಆಯ್ಕೆ ಸಮಿತಿ 2017ರ ಫೆಬ್ರವರಿಯಲ್ಲಿ ಸಲ್ಲಿಸಿದ ವರದಿಯಲ್ಲಿ, 1995-2002ರ ನಡುವೆ ಯುಪಿಎಸ್‌ಸಿ ನೇಮಕಾತಿ ಪ್ರಮಾಣ ಕಡಿಮೆಯಾಗಿದ್ದರಿಂದ ಜಂಟಿ ಕಾರ್ಯದರ್ಶಿ, ನಿರ್ದೇಶಕ, ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಕೊರತೆ ಕಂಡುಬಂದಿದೆ ಎಂದು ಹೇಳಿತ್ತು. ನೀತಿ ಆಯೋಗವು ತನ್ನ ಮೂರು ವರ್ಷಗಳ ಕಾರ್ಯಸೂಚಿಯಲ್ಲಿ ಖಾಸಗಿ ವಲಯದ ತಜ್ಞರ ಸೇವೆಯನ್ನು ಸರಕಾರಿ ವಲಯದಲ್ಲಿ ಬಳಸುವ ವಿಷಯವನ್ನೇ ಪ್ರಧಾನವಾಗಿ ಉಲ್ಲೇಖಿಸಿತ್ತು. ಇವೆರಡನ್ನೂ ಗಮನಿಸಿ ಸರಕಾರ ಈ ಕ್ರಮ ಕೈಗೊಂಡಿದೆ.

ಯಾವ ಇಲಾಖೆ ಹುದ್ದೆ?

ಕಂದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ ಮತ್ತು ರೈತರ ಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಸರಕು ಸಾಗಣೆ, ಪರಿಸರ, ಅರಣ್ಯ ಮತ್ತು ಹವಾಮಾನ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ನಾಗರಿಕ ವಿಮಾನ ಯಾನ, ವಾಣಿಜ್ಯ ಇಲಾಖೆಗಳು.

ಅಧಿಕಾರಿಗಳ ಕೊರತೆ

ಸಾಮಾನ್ಯವಾಗಿ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಯುಪಿಎಸ್ಸಿ ಮೂಲಕ ನೇಮಕಗೊಂಡ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಅಧಿಕಾರಿಗಳು ನಿಭಾಯಿಸುತ್ತಾರೆ. ಆದರೆ, ದೇಶದಲ್ಲಿ ಐಎಎಸ್‌ ಅಧಿಕಾರಿಗಳದ್ದೇ ಕೊರತೆ ಇದೆ. 6500 ಅಧಿಕಾರಿಗಳು ಇರಬೇಕಾದಲ್ಲಿ ಕೇವಲ 5004 ಮಂದಿ ಇದ್ದಾರೆ.

ಸರಕಾರಗಳು ಪಾರ್ಶ್ವ ನೇಮಕದ ಮೂಲಕ ತಜ್ಞರ ಸೇವೆ ಬಳಸಿಕೊಳ್ಳುವುದು ಹೊಸದೇನಲ್ಲ. ಹಿಂದಿನ ಸರಕಾರಗಳಲ್ಲೂ ಇದು ನಡೆದಿತ್ತು. ಆದರೆ, ಪ್ರತಿಭಾವಂತರ ಆಯ್ಕೆಗೆ ಮುಕ್ತ ಅರ್ಜಿ ಸ್ವೀಕಾರ ನಡೆಸುತ್ತಿರುವುದು ಇದೇ ಮೊದಲು.

ಆರ್ಥಿಕ ಸಲಹೆಗಾರರಾಗಿದ್ದ ಮನಮೋಹನ್‌ ಸಿಂಗ್‌, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ, ಆರ್‌ಬಿಐ ಮಾಜಿ ಗವರ್ನರ್‌ ಬಿಮಲ್‌ ಜಲಾನ್‌, ಡೆಪ್ಯುಟಿ ಗವರ್ನರ್‌ ರಾಕೇಶ್‌ ಮೋಹನ್‌, ಮಾಜಿ ಹಣಕಾಸು ಕಾರ‍್ಯದರ್ಶಿ ವಿಜಯ ಕೇಳ್ಕರ್‌, ಆರ್ಥಿಕ ಸಲಹೆಗಾರರಾಗಿದ್ದ ಶಂಕರ್‌ ಆಚಾರ್ಯ, ಅರವಿಂದ್‌ ವೀರಮಣಿ, ಅರವಿಂದ್‌ ಸುಬ್ರಹ್ಮಣಿಯನ್‌, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್‌ ಪನಗಾರಿಯಾ, ಕಾರ್ಯದರ್ಶಿ ವೈದ್ಯ ರಾಜೇಶ್‌ ಕೊಟೇಚಾ, ಕುಡಿಯುವ ನೀರು ಮತ್ತು ಒಳಚರಂಡಿ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರ ಅಯ್ಯರ್‌, ಮಾಜಿ ಇಂಧನ ಕಾರ್ಯದರ್ಶಿ ರಾಮ್‌ ವಿನಯ್‌ ಶಶಿ.

Comments are closed.