ರಾಷ್ಟ್ರೀಯ

ಹರಿದ್ವಾರದ ಹರ್‌ ಕಿ ಪೌರಿ ಪ್ರದೇಶದಲ್ಲಿ ಗಂಗಾನದಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ

Pinterest LinkedIn Tumblr

ಹೊಸದಿಲ್ಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹರಿದ್ವಾರದ ಹರ್‌ ಕಿ ಪೌರಿ ಪ್ರದೇಶದಲ್ಲಿ ಗಂಗಾನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು.

ವಾಜಪೇಯಿ ಅವರ ಪುತ್ರಿ ನಮಿತಾ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನೀಹಾರಿಕಾ ಅವರು ಸ್ಮೃತಿ ಸ್ಥಳದಲ್ಲಿ ಅಟಲ್‌ ಜೀ ಅವರ ಅಂತ್ಯಕ್ರಿಯೆ ನೆರವೇರಿದ ಸ್ಥಳದಿಂದ ಬೆಳಗ್ಗೆ ಮೂರು ಮಣ್ಣಿನ ಮಡಿಕೆಗಳಲ್ಲಿ ಅಸ್ಥಿ ಮತ್ತು ಚಿತಾಭಸ್ಮವನ್ನು ಸಂಗ್ರಹಿಸಿದರು. ಬಳಿಕ ರಸ್ತೆ ಮಾರ್ಗವಾಗಿ ಪ್ರೇಮ್ ಆಶ್ರಮಕ್ಕೆ ತರಲಾಯಿತು.

ಇದಕ್ಕೆ ಮುನ್ನ, ಗೃಹಸಚಿವ ರಾಜನಾಥ್ ಸಿಂಗ್‌, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವರ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವಾಜಪೇಯಿ ಅವರ ‘ಅಸ್ಥಿ ಕಲಶ ಯಾತ್ರೆ’ಯಲ್ಲಿ ಪಾಲ್ಗೊಂಡರು.

ಹರಿದ್ವಾರದಲ್ಲಿ ಮಾಜಿ ಪ್ರಧಾನಿಯ ಚಿತಾಭಸ್ಮ ಮತ್ತು ಅಸ್ಥಿಗಳನ್ನು ಪುಣ್ಯ ನದಿಗಳಾದ ಗಂಗಾ, ಯಮುನಾ ಮತ್ತು ತಾಪಿ ನದಿಗಳಲ್ಲಿ ಸಕಲ ಗೌರವಗಳೊಂದಿಗೆ ವಿಸರ್ಜಿಸಲಾಯಿತು.

ದೇಶದ 10ನೇ ಪ್ರಧಾನ ಮಂತ್ರಿಯಾಗಿದ್ದ ಬಿಜೆಪಿಯ ಪರಮೋಚ್ಚ ನಾಯಕ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ (93) ಅವರು ಗುರುವಾರ ಸಂಜೆ ಕೊನೆಯುಸಿರೆಳೆದಿದ್ದರು. ಅವರ ಅಂತ್ಯಕ್ರಿಯೆಯನ್ನು ರಾಷ್ಟ್ರೀಯ ರಾಜಧಾನಿಯ ಸ್ಮೃತಿ ಸ್ಥಳದಲ್ಲಿ ಸಂಪೂರ್ಣ ಸರಕಾರಿ ಗೌರವಗಳೊಂದಿಗೆ ಶುಕ್ರವಾರ ನೆರವೇರಿಸಲಾಗಿತ್ತು.

Comments are closed.