ರಾಷ್ಟ್ರೀಯ

ಕೇರಳ: ಎನ್‌ಡಿಆರ್‌ಎಫ್‌ನಿಂದ 10,000 ಜನರ ಸುರಕ್ಷಿತ ಸ್ಥಳಾಂತರ

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕೇರಳದಲ್ಲಿ ಪ್ರವಾಹ ಪೀಡಿತ ಜನರ ರಕ್ಷಿಸುವ ಅತಿದೊಡ್ಡ ಕಾರ್ಯ ನಡೆಸಿದೆ.

ಆಗಸ್ಟ್‌ 8ರಿಂದ ಶನಿವಾರ ಸಂಜೆಯ ವೇಳೆ ಒಟ್ಟಾರೆ 194 ಜನರನ್ನು ಮುಳುಗಡೆಯಿಂದ ರಕ್ಷಿಸಿ, 10,467 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ ಸೇನಾ ಯೋಧ ತಂಡ.

ಎನ್‌ಡಿಆರ್‌ಎಫ್‌ನ 58 ತಂಡಗಳು ಕೇರಳದಲ್ಲಿ ಕಾರ್ಯನಿರತವಾಗಿದ್ದು, ರಾಜ್ಯವೊಂದರಲ್ಲಿ ವಿಪತ್ತು ನಿರ್ವಹಣೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ತಂಡ ಹೊಂದಿರುವುದು ಇದೇ ಮೊದಲು. ಪ್ರವಾಹ ಪರಿಸ್ಥಿತಿಯಲ್ಲಿ ಎನ್‌ಡಿಆರ್‌ಎಫ್ ತಂಡಗಳು ಸಮರೋಪಾಯದಿಯಲ್ಲಿ ಕೆಲಸ ಮಾಡುತ್ತಿವೆ.

2006ರಲ್ಲಿ ಎನ್‌ಡಿಆರ್‌ಎಫ್ ರಚನೆಯ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯದಲ್ಲಿ ಇದೇ ಮೊದಲು ಎನ್‌ಡಿಆರ್‌ಎಫ್ ತೊಡಗಿಸಿಕೊಂಡಿದೆ. ಪ್ರತಿ ತಂಡದಲ್ಲೂ 35-40 ಸಿಬ್ಬಂದಿ ಇದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಂದರ್ಭ 194 ಜನರ ಜತೆ, 12 ಪ್ರಾಣಿಗಳನ್ನೂ ರಕ್ಷಿಸಲಾಗಿದೆ. 159 ಮಂದಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ತ್ರಿಶೂರ್‌ (15), ಪತ್ತನಂತಿಟ್ಟ (13), ಅಳಪ್ಪುಳ (11), ಎರ್ನಾಕುಳಂ (5), ಇಡುಕ್ಕಿ (4), ಮಳಪ್ಪುರಂ (3) ವಯನಾಡ್ ಮತ್ತು ಕೋಯಿಕ್ಕೋಡ್‌ (ತಲಾ 2) ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಆಗಸ್ಟ್‌ 8ರಿಂದ ಕೇರಳ ಪ್ರವಾಹಕ್ಕೆ ಸಿಲುಕಿ 194 ಮಂದಿ ಬಲಿಯಾಗಿದ್ದರೆ, 36 ಮಂದಿ ಕಣ್ಮರೆಯಾಗಿದ್ದಾರೆ. 3.14 ಲಕ್ಷಕ್ಕೂ ಅಧಿಕ ಮಂದಿ ರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

Comments are closed.