ರಾಷ್ಟ್ರೀಯ

ಮದುವೆಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ; ಪೋಷಕರೊಂದಿಗಿರುವ ಪತ್ನಿಗಾಗಿ ಸುಪ್ರೀಂ ಕೋರ್ಟ್ ಮೊರೆ

Pinterest LinkedIn Tumblr

ಹೊಸದಿಲ್ಲಿ: ಹಿಂದೂ ಯುವತಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸಲ್ಮಾನ್ ಯುವಕನೊಬ್ಬ ತನ್ನ ಪತ್ನಿ ಜತೆ ಬದುಕಲು ವಿರೋಧ ವ್ಯಕ್ತವಾಗುತ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾನೆ.

ಅರ್ಜಿದಾರ ಎಮ್ ಡಿ ಇಬ್ರಾಹಿಂ ಸಿದ್ಧಿಕಿ ಅಲಿಯಾಸ್ ಆರ್ಯನ್ ಆರ್ಯಾ (33) ತಾನು ರಾಯ್ಪುರದ 23 ವರ್ಷದ ಹಿಂದೂ ಜೈನ ಯುವತಿಯನ್ನು ಮದುವೆಯಾಗಿದ್ದೇನೆ. ಅವರ ಧರ್ಮಕ್ಕೆ ಮತಾಂತರಗೊಂಡರೂ ಸಹ ಆಕೆಯ ಪೋಷಕರು ಮತ್ತು ಹಿಂದೂ ಬಲಪಂಥೀಯ ಸಂಘಟನೆಯೊಂದು ತಮ್ಮನ್ನು ಬಲವಂತವಾಗಿ ಪ್ರತ್ಯೇಕಿಸಿದ್ದಾರೆ. ನಾವಿಬ್ಬರು ಜತೆಯಾಗಿ ಬದುಕಲು ಸಹಾಯ ಮಾಡಿ ಎಂದು ಕೋರ್ಟ್‌ನಲ್ಲಿ ಅಳಲು ತೊಡಿಕೊಂಡಿದ್ದಾನೆ.

ಆರ್ಯನ್ ಮನವಿಗೆ ಸ್ಪಂದಿಸಿರುವ ಕೋರ್ಟ್, ಆಗಸ್ಟ್ 27ರೊಳಗೆ ಯುವತಿಯನ್ನು ಕೋರ್ಟ್‌ನಲ್ಲಿ ಹಾಜರುಪಡಿಸುವಂತೆ ಜಿಲ್ಲಾ ಎಸ್ಪಿಗೆ ಸೂಚನೆ ನೀಡಿದೆ. ಅದರ ಜತೆಗೆ ಒಂದು ವೇಳೆ ಯುವತಿ ನಿನ್ನ ಜತೆ ಬರಲೊಪ್ಪದಿದ್ದರೆ, ಪ್ರಕರಣವನ್ನು ಇಲ್ಲಿಗೆ ಕೈ ಬಿಡಲಾಗುವುದು ಎಂದು ಯುವಕನಿಗೆ ಎಚ್ಚರಿಸಿದೆ.

ಕಳೆದ 5 ವರ್ಷದಿಂದ ಸ್ನೇಹಿತರಾಗಿದ್ದ ನಾವು 3 ವರ್ಷದ ಈಚೆಗೆ ಪ್ರೀತಿಸತೊಡಗಿದೆವು. ಫೆಬ್ರವರಿ 23ಕ್ಕೆ ಹಿಂದೂವಾಗಿ ನಾನು ಮತಾಂತರಗೊಂಡೆ. ಫೆಬ್ರವರಿ 25ರಂದು ನಗರದಲ್ಲಿರುವ ಆರ್ಯ ಸಮಾಜದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದೆವು. ತನ್ನ ಪೋಷಕರಿಂದ ಮದುವೆಯ ವಿಷಯವನ್ನು ಗುಟ್ಟಾಗಿಟ್ಟಿದ್ದ ಯುವತಿ ಸೂಕ್ತ ಕಾಲದಲ್ಲಿ ಅದನ್ನು ಬಹಿರಂಗ ಪಡಿಸಬೇಕೆಂದಿದ್ದಳು. ಮಾರ್ಚ್ 22 ರಂದು ರಾಯ್ಪುರ ಮುನ್ಸಿಪಲ್ ಕಾರ್ಪೋರೇಷನ್‌ನಲ್ಲಿ ಮದುವೆ ನೋಂದಣಿ ಮಾಡಿಕೊಂಡಿದ್ದೆವು. ಜೂನ್ 17ಕ್ಕೆ ವಿಷಯ ಆಕೆಯ ಪೋಷಕರಿಗೆ ಗೊತ್ತಾಯಿತು. ತಮ್ಮ ಮದುವೆಯನ್ನು ಪೋಷಕರು ಒಪ್ಪಲ್ಲವೆಂದು ಯುವತಿ ಜೂನ್ 30ರಂದು ಮನೆ ಬಿಟ್ಟು ಬಂದಳು. ಆದರೆ ಆಕೆಯನ್ನು ಆಕೆಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದರು. ಆಕೆಯ ತಂದೆಯ ಪ್ರಭಾವದಿಂದ ಪೊಲೀಸರು ಆಕೆ ಪೋಷಕರ ಜತೆಗೆ ಹೋಗಲು ಬಯಸುತ್ತಾಳೆಂದು ತಪ್ಪು ಹೇಳಿಕೆ ಬರೆಸಿಕೊಂಡರು. ಹೀಗಾಗಿ ಆಕೆ ಬಲವಂತವಾಗಿ ಪೋಷಕರ ಜತೆ ಹೋಗುವಂತಾಯಿತು. ಬಳಿಕ ಕೆಲ ಹಿಂದೂ ಸಂಘಟನೆಗಳು ಕೂಡ ನನಗೆ ಜೀವ ಬೆದರಿಕೆ ಹಾಕಿವೆ ಎಂದು ಯುವಕ ಹೇಳಿಕೊಂಡಿದ್ದಾನೆ.

ಈ ಹಿಂದೆ ಪೊಲೀಸರಿಗೆ ಸಹ ದೂರು ನೀಡಿದ್ದೆ. ಬಿಲಾಸಪುರದ ಛತ್ತೀಸ್‌ಗಢ ಹೈಕೋರ್ಟ್ ಪೀಠದಲ್ಲಿ ಈ ಹಿಂದೆ ಪ್ರಕರಣದ ವಿಚಾರಣೆ ನಡೆದಿತ್ತು. ವಿಚಾರಣೆ ಸಂದರ್ಭದಲ್ಲಿ ಯುವತಿ ತನ್ನ ಇಚ್ಛೆಯಂತೆ ಮದುವೆಯಾಗಿದ್ದೇನೆ, ಪತಿಯೊಂದಿಗೆ ಬಾಳಲು ಬಯಸುತ್ತೇನೆ ಎಂದಿದ್ದಳು. ಆಗ ಆಕೆಯ ಪೋಷಕರು ಕೋರ್ಟ್‌ನಲ್ಲಿಯೇ ಅತ್ತು ರಂಪಾಟ ಮಾಡಿದರು. ಆಕೆಯ ತಾಯಿ ಮಗಳಿಗೆ ಮನಬಂದಂತೆ ಥಳಿಸಿದಳು ಮತ್ತು ನಿನ್ನನ್ನು ಕೊಲ್ಲುತ್ತೇನೆ, ನಾವು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಸಿದಳು. ಪೋಷಕರ ಭಾವನಾತ್ಮಕ ಬೆದರಿಕೆಗೆ ಮಣಿದ ಕೋರ್ಟ್ ಆಕೆ ಬಯಸಿದ್ದರೂ ಪತಿ ಜತೆ ಹೋಗೆಂದು ಆಕೆಗೆ ನಿರ್ದೇಶನ ನೀಡಲಿಲ್ಲ. ಯುವತಿ ಪ್ರೌಢಾವಸ್ಥೆ ಬಂದ ಮೇಲೆ ಆಕೆಯ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ತೀರ್ಪು ಪಡೆದುಕೊಂಡ ಸಫಿನ್ ಜಹಾನ್ vs ಕೆ ಎಮ್ ಅಸೋಕನ್ ( ಹಾದಿಯಾ ಪ್ರಕರಣ ) ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ, ಎಂದು ಆರ್ಯನ್ ಕೋರ್ಟ್‌ ಮುಂದೆ ವಾದಿಸಿದ್ದಾನೆ.

Comments are closed.