ರಾಷ್ಟ್ರೀಯ

ಗುಲಾಂ ನಬಿ ಆಜಾದ್ ಹೇಳಿಕೆಗೆ ಲಷ್ಕರ್ ಎ ತೊಯ್ಬಾ ಬೆಂಬಲ; ಬಿಜೆಪಿ ತಿರುಗೇಟು

Pinterest LinkedIn Tumblr


ನವದೆಹಲಿ: ಜಮ್ಮು-ಕಾಶ್ಮೀರದಲ್ಲಿನ ರಾಜ್ಯಪಾಲರ ಆಡಳಿತಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ನೀಡಿರುವ ಹೇಳಿಕೆಯನ್ನು ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾ ಸ್ವಾಗತಿಸಿದ್ದರೆ, ಮತ್ತೊಂದೆಡೆ ಬಿಜೆಪಿ ಅಂಕಿ-ಅಂಶ ಸಹಿತ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನ ಕಾರ್ಯಾಚರಣೆಯಲ್ಲಿ ಉಗ್ರರಗಿಂತ ಹೆಚ್ಚು ಜನಸಾಮಾನ್ಯರೇ ಬಲಿಯಾಗಿದ್ದಾರೆ ಎಂದು ಗುಲಾಂ ನಬಿ ಹೇಳಿದ್ದರು. ಈ ಬಗ್ಗೆ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಬಾ ಇ ಮೇಲ್ ಮೂಲಕ ಪತ್ರಿಕಾ ಪ್ರಕಟಣೆ ನೀಡಿದೆ.

ಲಷ್ಕರ್ ಎ ತೊಯ್ಬಾದ ವರಿಷ್ಠ ಮಹಮ್ಮದ್ ಷಾ ಪ್ರಕಾರ, ಕಾಂಗ್ರೆಸ್ ಮುಖಂಡ ಆಜಾದ್ ಅವರ ಹೇಳಿಕೆ ಸರಿಯಾಗಿದೆ. ನಮ್ಮದು ಕೂಡಾ ಗುಲಾಂ ನಬಿ ಆಜಾದ್ ಅವರ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾನೆ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರುವ ಮೂಲಕ ಭಾರತವನ್ನು ಜಗಮೋಹನ್ ಕಾಲಘಟ್ಟಕ್ಕೆ ಒಯ್ಯಲಾಗುತ್ತಿದೆ. ಅಷ್ಟೇ ಅಲ್ಲ ಈ ಕ್ರಮ ಸಾಮೂಹಿಕ ಹತ್ಯಾಕಾಂಡಕ್ಕೆ ದಾರಿಯಾಗಬಲ್ಲದು ಎಂದು ಎಚ್ಚರಿಕೆ ನೀಡಿರುವುದಾಗಿ ಲಷ್ಕರ್ ನ ವಕ್ತಾರ ಅಬ್ದುಲ್ ಘಜ್ನವಿ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.

ಅಲ್ಲದೇ ರಂಜಾನ್ ಸಂದರ್ಭದಲ್ಲಿ ಕದವಿರಾಮ ಘೋಷಿಸಿರುವುದು ಒಂದು ನಾಟಕ ಎಂದು ಹೇಳಿರುವ ಲಷ್ಕರ್, ಆರ್ ಎಸ್ ಎಸ್ ಅಜೆಂಡಾವನ್ನು ಜಾರಿಗೊಳಿಸಲು ಪಿಡಿಪಿ ಮುಖ್ಯಸ್ಥೆ, ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಉತ್ತಮ ರೀತಿಯಲ್ಲಿ ಯತ್ನಿಸಿದ್ದಾರೆ ಎಂದು ಆರೋಪಿಸಿದೆ. ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಆರ್ ಎಸ್ ಎಸ್ ಅಜೆಂಡಾಕ್ಕೆ ಅನುಕೂಲ ಮಾಡಿಕೊಡಲು ಮುಫ್ತಿ ಜಾಣ್ಮೆಯಿಂದ ನಡೆದುಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸುಮಾರು 8 ಲಕ್ಷ ಯೋಧರು ಅಮಾನವೀಯ ಕೃತ್ಯ ಎಸಗಲು ನಿರತರಾಗಿದ್ದಾರೆ. ಈ ಪಡೆಗಳಿಂದಾಗಿ ಜನರು ಗುಲಾಮರಾಗುವಂತಾಗಿದೆ ಎಂದು ದೂರಿದೆ.

ಆಜಾದ್ ಹೇಳಿದ್ದೇನು?

ಇತ್ತೀಚೆಗೆ ನ್ಯೂಸ್ 18 ಇಂಗ್ಲಿಷ್ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮಾತನಾಡುತ್ತ, ಅವರು ಹತ್ಯಾಕಾಂಡದ ಬಗ್ಗೆ ಹೇಳಿದ್ದಾರೆ. ನಾಲ್ಕು ಮಂದಿ ಉಗ್ರರ ವಿರುದ್ಧ ಕಾರ್ಯಾಚರಣೆಗಾಗಿ ಯೋಧರು 20 ಮಂದಿ ನಾಗರಿಕರನ್ನು ಕೊಲ್ಲುತ್ತಾರೆ. ಅವರ ಕಾರ್ಯಾಚರಣೆ ಉಗ್ರರಿಗಿಂತ ಹೆಚ್ಚಾಗಿ ನಾಗರಿಕರ ವಿರುದ್ಧವೇ ಆಗಿದೆ. ಅದೇ ರೀತಿ ಪುಲ್ವಾಮಾ ಪ್ರದೇಶದಲ್ಲಿ 13 ಜನರನ್ನು ಕೊಂದಿದ್ದಾರೆ. ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ. ಈ ಕಾರ್ಯಾಚರಣೆಯಿಂದ ಯಾವುದೇ ಉಪಯೋಗವಿಲ್ಲ. ಇದೊಂದು ವ್ಯವಸ್ಥಿತ ಹತ್ಯಾಕಾಂಡ. ಯಾವುದೇ ಕಾರಣಕ್ಕೂ ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳುವುದರ ಬಗ್ಗೆ ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ಬದ್ಧ ವೈರಿಗಳಾಗಿದ್ದ ಅಮೆರಿಕಾ ಹಾಗೂ ಉತ್ತರ ಕೊರಿಯಾ ಕೂಡಾ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿದೆ ಎಂದು ಹೇಳಿದ್ದರು.

ಆಜಾದ್ ಹೇಳಿಕೆಯನ್ನು ಉಗ್ರಗಾಮಿ ಸಂಘಟನೆ ಲಷ್ಕರ್ ಬಹುಪರಾಕ್ ಹೇಳಿತ್ತು. ಆದರೆ ಬಿಜೆಪಿ ಇದಕ್ಕೆ ತಕ್ಕ ತಿರುಗೇಟು ನೀಡಿದೆ.

ಅಂಕಿ ಅಂಶ ಬಿಚ್ಚಿಟ್ಟ ಬಿಜೆಪಿ:

2012ರಲ್ಲಿ ಜಮ್ಮು-ಕಾಶ್ಮೀರದಲ್ಲಿ 72 ಉಗ್ರರು ಬಲಿಯಾಗಿದ್ದು, 2013ರಲ್ಲಿ 67 ಉಗ್ರರು ಸಾವನ್ನಪ್ಪಿದ್ದರು. ನಾವು 2014ರ ಜೂನ್ ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಧಿಕಾರದ ಗದ್ದುಗೆ ಏರಿದ್ದೇವು. 2014ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ 110 ಉಗ್ರರು ಬಲಿಯಾಗಿದ್ದರು. 2015ರಲ್ಲಿ 108 ಉಗ್ರರು, 2016ರಲ್ಲಿ 150 ಉಗ್ರರು, 2017ರಲ್ಲಿ 217 ಉಗ್ರರು ಹಾಗೂ 2018ರ ಮೇ ವರೆಗೆ 75 ಉಗ್ರರನ್ನು ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಅಂಕಿ, ಅಂಶಗಳ ಮಾಹಿತಿ ನೀಡಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ. ಹೀಗಾಗಿ ಗುಲಾಂ ನಬಿ ಆಜಾದ್ ಅವರು ಹೇಳಿಕೆಯನ್ನು ಲಷ್ಕರ್ ಎ ತೊಯ್ಬಾ ಸ್ವಾಗತಿಸುತ್ತಿದೆ ಎಂದು ಹೇಳಿದರು.

Comments are closed.