ರಾಷ್ಟ್ರೀಯ

ಅಲೀಗಢ ಮುಸ್ಲಿಂ ವಿವಿಯಲ್ಲಿ ಶಾಖೆ: ಕುಲಪತಿಗೆ ಆರೆಸ್ಸೆಸ್‌ ಕಾರ್ಯಕರ್ತರ ಪತ್ರ

Pinterest LinkedIn Tumblr


ಆಗ್ರಾ: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ (ಎಎಂಯು) ಶಾಖೆ ಆರಂಭಿಸಲು ಅನುಮತಿ ನೀಡುವಂತೆ ವಿವಿ ಕುಲಪತಿ ತಾರೀಖ್‌ ಮನ್ಸೂರ್‌ ಅವರಿಗೆ ಆರೆಸ್ಸೆಸ್‌ ಪತ್ರ ಬರೆದಿದೆ.

ಆರೆಸ್ಸೆಸ್‌ ಕಾರ್ಯಕರ್ತ ಮೊಹಮ್ಮದ್‌ ಅಮೀರ್‌ ಈ ಪತ್ರ ಬರೆದಿದ್ದು, ‘ಆರೆಸ್ಸೆಸ್‌ ಬಗ್ಗೆ ವಾಸ್ತವಾಂಶಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ತೀರಾ ಅಗತ್ಯವಾಗಿದೆ. ಹಲವು ವಿದ್ಯಾರ್ಥಿಗಳು ಸಂಘಟನೆ ಬಗ್ಗೆ ಏನೂ ತಿಳಿಯದೆ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಆರೆಸ್ಸೆಸ್‌ ಸಂಪೂರ್ಣ ದೇಶಸೇವೆಗೆ ಸಮರ್ಪಿಸಿಕೊಂಡ ಸಂಘಟನೆಯಾಗಿದ್ದು, ಯಾವುದೇ ಧಾರ್ಮಿಕ ತಾರತಮ್ಯವಿಲ್ಲದೆ ಕೆಲಸ ಮಾಡುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಎಎಂಯು ವಿದ್ಯಾರ್ಥಿಗಳಲ್ಲಿ ಆರೆಸ್ಸೆಸ್‌ ಬಗ್ಗೆ ತಪ್ಪು ಕಲ್ಪನೆಗಳೇ ತುಂಬಿದ್ದು, ಕ್ಯಾಂಪಸ್‌ನಲ್ಲಿ ಶಾಖೆಗಳು ಆರಂಭವಾದರೆ ಅವೆಲ್ಲ ದೂರವಾಗಬಹುದು’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಆಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಮಶ್ಕೂರ್ ಅಹ್ಮದ್‌ ಉಸ್ಮಾನಿ ಅವರನ್ನು ಸಂಪರ್ಕಿಸಿದಾಗ, ‘ಇದು ಶೈಕ್ಷಣಿಕ ಸಂಸ್ಥೆಯೇ ಹೊರತು ರಾಜಕೀಯ ಕೇಂದ್ರವಲ್ಲ. ಈ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ. ದೇಶವನ್ನು ವಿಭಜಿಸುವುದೇ ಆರೆಸ್ಸೆಸ್‌ ಸಿದ್ಧಾಂತ. ನಾವು ಇದನ್ನು ವಿರೋಧಿಸುತ್ತೇವೆ. ಅಗತ್ಯವೆನಿಸಿದರೆ ವಿದ್ಯಾರ್ಥಿಗಳು ಇದರ ವಿರುದ್ಧ ಹೋರಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ವಿವಿ ಸಾರ್ವಜನಿಕ ಸಂಪರ್ಕ ವಿಭಾಗದ ಉಸ್ತುವಾರಿ ಸೈಫಿ ಕಿದ್ವಾಯಿ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ‘ಅವರು ಮನವಿ ಸಲ್ಲಿಸಿದ್ದರೆ ಕುಲಪತಿಗಳು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಎಎಂಯುನಲ್ಲಿ ಶಾಖೆ ಆರಂಭಿಸಿದರೆ ಅಪಾಯವೇನೂ ಇಲ್ಲ; ಆದರೆ ಅಲ್ಲಿ ಸಂಕುಚಿತ ಮನಸ್ಸಿನವರೇ ತುಂಬಿದ್ದು, ಶಾಖೆಗಳಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಎಂಬುದೇ ಸಂದೇಹಾಸ್ಪದ ಎಂದು ಅಲೀಗಢದ ಬಿಜೆಪಿ ಶಾಸಕ ದಲ್ವೀರ್ ಸಿಂಗ್ ಹೇಳಿದ್ದಾರೆ.

Comments are closed.