ಅಂತರಾಷ್ಟ್ರೀಯ

ಪಾಕ್ ಹಾಕಿ ಗೋಲ್ ಕೀಪರ್‌ಗೆ ಭಾರತೀಯನ ಹೃದಯ ಕಸಿ..?

Pinterest LinkedIn Tumblr


ಮುಂಬೈ : ಪಾಕಿಸ್ತಾನದ ಖ್ಯಾತ ಕ್ರೀಡಾಪಟು ಮನ್ಸೂರ್ ಅಹ್ಮದ್‌ ಚಿಕಿತ್ಸೆಗೆ ಭಾರತಕ್ಕೆ ಬರಲಿದ್ದಾರೆ. ಹಾಕಿ ಗೋಲ್ ಕೀಪರ್ ಆಗಿದ್ದ ಮನ್ಸೂರ್ ಅಹ್ಮದ್ ಭಾರತಕ್ಕೆ ಬರಲು ವೀಸಾಕ್ಕಾಗಿ ಮೋದಿ ಸರ್ಕಾರವನ್ನ ಮನವಿ ಮಾಡಿದ್ದಾರೆ. ಹಾಗೂ ಅವರಿಗೆ ಭಾರತೀಯರೊಬ್ಬರ ಹೃದಯವನ್ನು ಕಸಿ ಮಾಡುವ ಸಾಧ್ಯತೆಯಿದೆ.

ಮಾಜಿ ಗೋಲ್‌ ಕೀಪರ್ ಮನ್ಸೂರ್ ಅಹ್ಮದ್‌ಗೆ ಫೋರ್ಟಿಸ್ ಆಸ್ಪತ್ರೆ ಸಂಸ್ಥೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ. ಅಲ್ಲದೆ, ಸದ್ಯ ಪಾಕಿಸ್ತಾನದ ಕರಾಚಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಮಾಜಿ ಗೋಲ್‌ ಕೀಪರ್‌ಗೆ ತನ್ನ ಚೆನ್ನೈ ಹಾಗೂ ಮುಂಬೈನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದಾಗಿ ಆಹ್ವಾನಿಸಿದೆ. ಆದರೆ, ತನಗೆ ಹಣಕಾಸಿನ ನೆರವು ಬೇಡವೆಂದಿರುವ ಹಾಕಿ ಮಾಜಿ ಗೋಲ್‌ಕೀಪರ್‌ , ಅವರ ವೈದ್ಯ ಪರ್ವೇಜ್ ಅಹ್ಮದ್ ಸೂಚನೆ ಮೇರೆಗೆ ಭಾರತಕ್ಕೆ ಬರಲು ಮುಂದಾಗಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನೆರವು ನೀಡುವ ವಿಶ್ವಾಸವನ್ನು ಸಹ ಮನ್ಸೂರ್ ಅಹ್ಮದ್ ಹೊಂದಿದ್ದಾರೆ.

ಹೃದಯ ಕಸಿ ಚಿಕಿತ್ಸೆಗೆ ಮನ್ಸೂರ್ ಅಹ್ಮದ್‌ಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಬಂದ ಬಳಿಕ ಮುಂಬೈ ಹಾಗೂ ಚೆನ್ನೈನ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಅವರನ್ನು ದಾಖಲಿಸಲಾಗುವುದು ಎಂದು ಆಸ್ಪತ್ರೆಯ ವಲಯ ನಿರ್ದೇಶಕ ಡಾ. ಎಸ್‌. ನಾರಾಯಣಿ ವಿಜಯ ಕರ್ನಾಟಕ ಸೋದರ ಪತ್ರಿಕೆ ಮುಂಬೈ ಮಿರರ್‌ಗೆ ತಿಳಿಸಿದ್ದಾರೆ. ಹಾಗೂ ಅವರು ಭಾರತಕ್ಕೆ ಪ್ರಯಾಣ ಬೆಳೆಸಲು ಆರೋಗ್ಯ ಸರಿಹೊಂದುತ್ತದೆಯೇ ಎಂಬುದನ್ನೂ ಪರೀಕ್ಷೆ ಮಾಡಲಾಗುವುದು ಎಂದು ಡಾ. ಎಸ್‌. ನಾರಾಯಣಿ ಮಾಹಿತಿ ನೀಡಿದ್ದಾರೆ.

ವಿದೇಶಿ ವ್ಯಕ್ತಿಗೆ ಹೃದಯ ಕಸಿ ಮಾಡಲು ಭಾರತದಲ್ಲಿ ಅನೇಕ ತೊಡಕುಗಳಿವೆ. ಯಾವುದೇ ಭಾರತೀಯನಿಗೆ ಹೃದಯ ಅಗತ್ಯವಿಲ್ಲದ ವೇಳೆಯಲ್ಲಿ ಮಾತ್ರ ವಿದೇಶಿಯರಿಗೆ ಹೃದಯವನ್ನು ಕಸಿ ಮಾಡಬಹುದು. ಹೀಗಾಗಿ ಹೃದಯ ದಾನಿಯನ್ನು ಹುಡುಕಲು ಕನಿಷ್ಠ ೪ ರಿಂದ ೬ ತಿಂಗಳು ಸಮಯ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ವಿದೇಶೀ ವ್ಯಕ್ತಿಗೆ ಹೃದಯ ಕಸಿ ಮಾಡುವ ಮುನ್ನ ಯಾವುದೇ ಭಾರತೀಯರನ್ನು ಕಡೆಗಣನೆ ಮಾಡಿಲ್ಲ ಎಂದು ಆಸ್ಪತ್ರೆಯವರು ಭಾರತ ಸರ್ಕಾರಕ್ಕೆ ಸ್ಪಷ್ಟನೆಯನ್ನು ನೀಡಬೇಕಾಗಿದೆ.

Comments are closed.