ರಾಷ್ಟ್ರೀಯ

ಕೇರಳದಿಂದ ಇದೀಗ ನಾಲ್ವರು ಬಿಜೆಪಿ ರಾಜ್ಯಸಭಾ ಸದಸ್ಯರು!

Pinterest LinkedIn Tumblr


ಕಾಸರಗೋಡು: ಈ ತನಕ ಬಿಜೆಪಿಗೆ ಒಂದು ಲೋಕಸಭಾ ಸದಸ್ಯನನ್ನು ಆಯ್ಕೆ ಮಾಡಲು ಸಾಧ್ಯವಾಗದ ಕೇರಳದಲ್ಲಿ ಇದೀಗ ಓರ್ವ ಕೇಂದ್ರ ಸಚಿವ ಸಹಿತ ನಾಲ್ವರು ರಾಜ್ಯ ಸಭಾ ಸದಸ್ಯರಿದ್ದಾರೆ !

ಬಿಜೆಪಿ ಕೇರಳ ಮಾಜಿ ರಾಜ್ಯಾಧ್ಯಕ್ಷ ವಿ.ಮುರಳೀಧರನ್‌ ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೇರಳದ ನಾಲ್ಕನೇ ಬಿಜೆಪಿ ಎಂಪಿಯಾಗಿದ್ದಾರೆ.

ವಿ.ಮುರಳೀಧರನ್‌ ಮಹಾರಾಷ್ಟ್ರದಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಇನ್ನೋರ್ವ ಮಲಯಾಳಿ ರಾಜೀವ್‌ ಚಂದ್ರಶೇಖರನ್‌ ಕರ್ನಾಟಕದಿಂದ ಚುನಾಯಿತರಾಗಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೇರಳದಲ್ಲಿ ಬಿಜೆಪಿಗೆ ಪ್ರಸ್ತುತ ಓರ್ವ ವಿಧಾನಸಭಾ ಸದಸ್ಯರಿದ್ದಾರೆ. ಮಾಜಿ ಸಚಿವ ಓ.ರಾಜಗೋಪಾಲನ್‌ ಅವರು ತಿರುವನಂತಪುರದ ನೇಮಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ವಾಜಪೇಯಿ ಸರಕಾರದಲ್ಲಿ ರೈಲ್ವೇ ಸಹ ಸಚಿವರಾಗಿದ್ದ ಓ.ರಾಜಗೋಪಾಲ್‌ ಈ ಹಿಂದೆ ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು.

ಆ ಬಳಿಕ ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಹಿರಿಯ ನಿವೃತ್ತ ಐಎಎಸ್‌ ಅಧಿಕಾರಿಯಾಗಿದ್ದ ಅಲ್ಫೋನ್ಸ್‌ ಕಣ್ಣತ್ತಾನ್‌ ಇದ್ದಾರೆ. ಖ್ಯಾತ ಮಲಯಾಳ ಚಿತ್ರನಟ ಸುರೇಶ್‌ಗೋಪಿ ಈಗಾಗಲೇ ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಅಲ್ಲದೇ ಬಿಜೆಪಿಯ ಕೇರಳದಿಂದ ರಾಜ್ಯಸಭೆಯಲ್ಲಿ ಆಂಗ್ಲೋ ಇಂಡಿಯನ್‌ ಪ್ರತಿನಿಧಿಯಾಗಿ ರಿಚಾರ್ಡ್‌ ಹೇ ಇದ್ದಾರೆ. ಕೇರಳದಿಂದ ಮೂಲಕ ಓರ್ವ ಕೇಂದ್ರ ಸಚಿವರ ಸಹಿತ ನಾಲ್ವರ ರಾಜ್ಯ ಸಭಾ ಸದಸ್ಯರು ಬಿಜೆಪಿಗಿದೆ.

ಮಂಗಳವಾರ ವಿ.ಮುರಳೀಧರನ್‌ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌, ವಕ್ತಾರ ಪಿ.ರಘುನಾಥ್‌, ಕಾಸರಗೋಡು ಜಿಲ್ಲಾಧ್ಯಕ್ಷ ಅಡ್ವಾ. ಕೆ.ಶ್ರೀಕಾಂತ್‌, ಕಾರ್ಯದರ್ಶಿ ಎಂ.ಬಾಲ್‌ರಾಜ್‌, ಯುವಮೋರ್ಚಾ ರಾಜ್ಯ ಮೀಡಿಯಾ ಸೆಲ್‌ ಸಂಚಾಲಕ ವಿಜಯ ಕುಮಾರ್‌ ರೈ ಸಹಿತ ನೇತಾರರು ದೆಹಲಿಗೆ ತೆರಳಿದ್ದರು.

Comments are closed.