ರಾಷ್ಟ್ರೀಯ

ಅಯೋಧ್ಯೆಯಲ್ಲಿ ಮಸೀದಿಯೇ ಇರಲಿಲ್ಲ: ಸ್ವಾಮಿ ಸ್ವರೂಪಾನಂದ ಸರಸ್ವತಿ

Pinterest LinkedIn Tumblr


ಭೋಪಾಲ್: ರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ಬಲಪಂಥೀಯರು ನೆಲಕ್ಕುರುಳಿಸಿದ ಕಟ್ಟಡ ಮಸೀದಿಯಲ್ಲ, ಆ ಜಾಗದಲ್ಲಿ ಮಸೀದಿಯೇ ಇರಲಿಲ್ಲ. ಅದೊಂದು ರಾಮನ ದೇವಾಲಯವಾಗಿತ್ತು ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ.

ರಾಮ ಮಂದಿರ ಹಾಗೂ ಬಾಬರಿ ಮಸೀದಿ ವಿವಾದದ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಶಂಕರಾಚಾರ್ಯ, ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಸೀದಿ ಅಸ್ತಿತ್ವದಲ್ಲಿಯೇ ಇರಲಿಲ್ಲ. ಕರ ಸೇವಕರು ದೇಗುಲವನ್ನು ಕೆಡವಿದ್ದರೇ ಹೊರತು, ಮಸೀದಿಯನ್ನಲ್ಲ ಎಂದು ಹೇಳಿದ್ದಾರೆ.

ವಿವಾದಿತ ಸ್ಥಳದಲ್ಲಿ ರಾಮನ ದೇಗುಲ ನಿರ್ಮಾಣದ ಕುರಿತು ನ್ಯಾಯಾಲಯದಲ್ಲಿ ಹೂಡಿರುವ ಅರ್ಜಿಯ ವಿಚಾರಣೆ ಈಗಾಗಲೇ ನಡೆಯುತ್ತಿದೆ. ಆದರೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡ ಬಳಿಕ ರಾಮನ ದೇಗುಲವನ್ನು ಮರು ನಿರ್ಮಾಣ ಮಾಡಲಾಗುತ್ತದೆ ಎಂದು ಶಂಕರಾಚಾರ್ಯ ಹೇಳಿದ್ದಾರೆ.

ಇದೇ ವೇಳೆ ಭ್ರಷ್ಟಾಚಾರದ ಕುರಿತು ಮಾತನಾಡಿರುವ ಇವರು, ದೇಶದಲ್ಲಿ ಭ್ರಷ್ಟಾಚಾರವೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಜಕಾರಣಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದಲ್ಲಿ ಚುನಾವಣೆಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ.

‘ಪ್ರಾಥಮಿಕ ವರದಿಯನ್ನು ಸಲ್ಲಿಸಲೂ ಕೂಡ ಪೊಲೀಸರಿಗೆ ಲಂಚವನ್ನು ನೀಡಬೇಕಾಗಿದೆ. ನಾನು ಧಾರ್ಮಿಕ ಮುಖಂಡ, ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ನಾನು ಮಾತನಾಡಿದರೆ, ನಾನು ಕಾಂಗ್ರೆಸ್ ಪಕ್ಷದ ಕಡೆ ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಕಾಂಗ್ರೆಸ್ಸಿಗನಾಗಿದ್ದೆ. ಆಗ ಬ್ರಿಟೀಷ್ ಆಡಳಿತದ ವಿರುದ್ಧ ಕಾಂಗ್ರೆಸ್ ಮಾತ್ರವೇ ಹೋರಾಟ ಮಾಡುತ್ತಿತ್ತು. ಇದೀಗ ಎಲ್ಲವೂ ಬದಲಾಗಿದೆ. ನಾನು ಶಂಕರಾಚಾರ್ಯ. ಸನಾತನ ಧರ್ಮವನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ’ ಎಂದು ತಿಳಿಸಿದ್ದಾರೆ.

Comments are closed.