ರಾಷ್ಟ್ರೀಯ

ಈ ಮದುವೆಯಲ್ಲಿ ನವಜೋಡಿ ಜತೆ 700 ಮಂದಿಯಿಂದ ಅಂಗಾಂಗ ದಾನ ವಾಗ್ದಾನ

Pinterest LinkedIn Tumblr


ನಾಸಿಕ್‌: ಇದೊಂದು ವಿಶೇಷ ಮದುವೆ, ನಾಸಿಕ್‌ನಲ್ಲಿ ನಡೆದ ಈ ಮದುವೆಯಲ್ಲಿ ಬಾಜಾ ಬಜಂತ್ರಿಯ ಅಬ್ಬರವಿರಲಿಲ್ಲ, ಆದರೂ ಎಲ್ಲೆಡೆ ಸುದ್ದಿಯಾದ ಮದುವೆ ಇದು. ಅಂಗಾಂಗ ದಾನ ಜಾಗೃತಿ ಆಂದೋಲಕ್ಕೆ ಈ ಮದುವೆ ವೇದಿಕೆಯಾಗಿ ಮಾರ್ಪಟ್ಟಿದ್ದೇ ವಿಶೇಷತೆಗೆ ಕಾರಣ.

ವಧು ಮತ್ತು ವರ ತಮ್ಮ ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿದ ಬಳಿಕ ಪ್ರೇರಿತರಾಗಿ ಹಾಜರಿದ್ದ 700 ಮಂದಿ ಇದೇ ರೀತಿ ಅಂಗಾಂಗ ದಾನಕ್ಕೆ ವಾಗ್ದಾನವ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ 60 ಮಂದಿ ರಕ್ತದಾನ ಕೂಡ ಮಾಡಿದ್ದಾರೆ.

ಭವಿಷ್ಯನಿಧಿ ಸಹಾಯಕ ಆಯುಕ್ತೆ ವರ್ಷಾ ಪಗರ್‌ ಮತ್ತು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸ್ವಪ್ನಿಲ್‌ ಕೊತ್ವಾಡೆ ಅವರ ಮದುವೆ ಇಂಥದ್ದೊಂದು ಮಹತ್ವದ ಸೇವಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಈ ರೀತಿಯಾಗಿ ಮದುವೆಯನ್ನು ವಿಶೇಷಗೊಳಿಸುವ ಮೂಲಕ ಈ ಜೋಡಿ ಪರಿಸರ ಮತ್ತು ಸಾಮಾಜಿಕ ಬದ್ಧತೆ ಮೆರೆದಿದೆ. ಅದೇ ರೀತಿ ಬಹಳಷ್ಟು ಮಂದಿಯಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಸಮಾಜ ಸೇವೆಯಲ್ಲಿ ಸಮಾನ ಆಸಕ್ತಿ ಹೊಂದಿರುವ ಈ ಜೋಡಿಯ ಮದುವೆಗೆ ಬಂದಿದ್ದ ಅತಿಥಿಗಳು ಅಂಗಾಂಗ ದಾನ ಕಾರ್ಯಕ್ರಮಕ್ಕೆ ಪ್ರತಿಕ್ರಿಯಿಸಿದ ರೀತಿ ಅದ್ಭುತ ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ಜಾಂವ್ಕರ್‌ ಹೇಳಿದ್ದಾರೆ.

Comments are closed.