ರಾಷ್ಟ್ರೀಯ

SP-BSP ಕೊನೇ ಕ್ಷಣದ ಮೈತ್ರಿ ಬಿಜೆಪಿ ಸೋಲಿಗೆ ಕಾರಣ: CM ಯೋಗಿ

Pinterest LinkedIn Tumblr


ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಫ‌ೂಲ್‌ಪುರ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ; ಅಲ್ಲದೆ ಕೊನೇ ಕ್ಷಣದಲ್ಲಿ ನಡೆದ ಎಸ್‌ ಪಿ, ಬಿಎಸ್‌ಪಿ ಮೈತ್ರಿಯ ಪರಿಣಾಮವನ್ನು ಊಹಿಸುವಲ್ಲಿ ನಾವು ಎಡವಿದೆವು ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ತನ್ನ ಸಂಸದೀಯ ಕ್ಷೇತ್ರವಾದ ಗೋರಖ್‌ಪುರದಲ್ಲಿ ಗೆದ್ದಿರುವ ಎಸ್‌ಪಿ ಅಭ್ಯರ್ಥಿ ಪ್ರವೀಣ್‌ ನಿಶಾದ್‌ ಮತ್ತು ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರ ಫ‌ೂಲ್‌ಪುರ ಕ್ಷೇತ್ರವನ್ನು ಜಯಿಸಿರುವ ನಾಗೇಂದ್ರ ಪಟೇಲ್‌ (ಎಸ್‌ಪಿ ಅಭ್ಯರ್ಥಿ) ಅವರನ್ನು ಅಭಿನಂದಿಸಿರುವ ಯೋಗಿ ಆದಿತ್ಯನಾಥ್‌ “ಜನರು ನೀಡಿರುವ ತೀರ್ಪನ್ನು ಪಕ್ಷವು ಆದರದಿಂದ ಗೌರವಿಸುತ್ತದೆ’ ಎಂದು ಹೇಳಿದ್ದಾರೆ.

ಎಸ್‌ಪಿ ಮತ್ತು ಬಿಎಸ್‌ಪಿ ಚುನಾವಣಾ ಮೈತ್ರಿಯನ್ನು “ರಾಜಕೀಯ ವ್ಯಾಪಾರ’ವೆಂದು ಟೀಕಿಸಿರುವ ಯೋಗಿ ಆದಿತ್ಯನಾಥ್‌, ಈ ವ್ಯಾಪಾರೀ ಮೈತ್ರಿಕೂಟದಿಂದ ದೇಶದಲ್ಲಿನ ಅಭಿವೃದ್ದಿಯ ಅಲೆಗೆ ತಡೆಯುಂಟಾಗುತ್ತದೆ’ ಎಂದು ಹೇಳಿದರು.

ಸಿಎಂ ಯೋಗಿ ಆದಿತ್ಯನಾಥ್‌ ಮುಂದುವರಿದು, “ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳು ಪ್ರಾಮುಖ್ಯ ಪಡೆಯುತ್ತವೆ; ರಾಷ್ಟ್ರೀಯ ವಿಷಯಗಳು ಹಿಂಬದಿಗೆ ತಳ್ಳಲ್ಪಡುತ್ತವೆ; ಮುಂದಿನ ವರ್ಷ ಮಹಾ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ರಾಷ್ಟ್ರೀಯ ವಿಷಯಗಳೇ ಪ್ರಾಮುಖ್ಯ ಪಡೆಯುತ್ತವೆ’ ಎಂದು ಹೇಳಿದರು.

ಸಿಎಂ ಯೋಗಿ ಆದಿತ್ಯನಾಥ್‌ ಅವರ ಗೋರಖ್‌ಪುರ ಕ್ಷೇತ್ರದಲ್ಲಿನ ಸೋಲು ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ; ಏಕೆಂದರೆ ಕಳೆದ 27 ವರ್ಷಗಳಿಂದ ಗೋರಖ್‌ಪುರ ಕ್ಷೇತ್ರವನ್ನು ಬಿಜೆಪಿ ಭದ್ರವಾಗಿ ಹಿಡಿದುಕೊಂಡಿತ್ತು.

ಮಹಾಂತ ಆದಿತ್ಯನಾಥ್‌ ಅವರು ಬಿಜೆಪಿಗಾಗಿ ಗೋರಖ್‌ಪುರ ಸೀಟನ್ನು ಮೊದಲ ಬಾರಿಗೆ ಗೆದ್ದುಕೊಟ್ಟಿದ್ದರು. 1996ರಲ್ಲಿ ಅವರ ಎರಡನೇ ಬಾರಿಗೆ ವಿಜಯ ಸಾಧಿಸಿದ್ದರು. 1998ರಲ್ಲಿ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರ ಲೋಕಸಭಾ ಕ್ಷೇತ್ರವನ್ನು ಮೊದಲ ಬಾರಿಗೆ ಗೆದ್ದಿದ್ದರು. ಅನಂತರದಲ್ಲಿ ಅವರು ಇನ್ನೂ ನಾಲ್ಕು ಬಾರಿ ಈ ಸೀಟನ್ನು ಗೆದ್ದು ದಾಖಲೆ ನಿರ್ಮಿಸಿದ್ದರು.

-ಉದಯವಾಣಿ

Comments are closed.