ತುಮಕೂರು: ಈಶಾನ್ಯ ರಾಜ್ಯಗಳಲ್ಲಿ ಎಡಪಂಥೀಯರ ಕೋಟೆ ಅಭೇದ್ಯ ಎನ್ನಲಾಗುತ್ತಿತ್ತು. ಆದರೆ, ಆ ಕೋಟೆಯನ್ನು ಯುವಶಕ್ತಿ ಹಾಗೂ ನಾರಿಶಕ್ತಿ ಧೂಳೀಪಟಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತ್ರಿ ರಾಜ್ಯ ಫಲಿತಾಂಶದ ಕುರಿತು ಹೇಳಿದರು.
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಯುವ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಕನ್ನಡದಲ್ಲೇ ಭಾಷಣ ಆರಂಭಿಸಿ ಮಾತನಾಡಿದರು.
ಕಾಂಗ್ರೆಸ್ನ್ನು ಜನರು ತಿರಸ್ಕರಿಸಿದ್ದಾರೆ ಎಂಬ ವಿಷಯ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ತಿಳಿದು ಬಂದಿದೆ. ತ್ರಿಪುರಾ ಫಲಿತಾಂಶ ಐತಿಹಾಸಿಕವಾದದ್ದು ಎಂದರು.
ಯುವಪೀಳಿಗೆಯೊಂದಿಗೆ ಯಾವುದೇ ರೀತಿಯ ಸಂವಾದ ನಡೆದರೂ ಅವುಗಳಿಂದ ಒಂದಲ್ಲ ಒಂದು ಅಂಶ ಕಲಿಯಬಹುದು. ಅದಕ್ಕೇ ನಾನು ಯುವಕರನ್ನು ಹೆಚ್ಚು ಭೇಟಿ ಮಾಡಲು, ಮಾತನಾಡಲು, ಅವರ ಅನುಭವಗಳನ್ನು ಕೇಳಲು ಸಾಧ್ಯವಾದ್ದಷ್ಟು ಪ್ರಯತ್ನಿಸುತ್ತೇನೆ ಎಂದರು.
ಸಮಾವೇಶದ ಕುರಿತು ಮಾತನಾಡಿದ ಮೋದಿ, ರಾಮಕೃಷ್ಣ ಆಶ್ರಮ ಸ್ಥಾಪನೆಯ 25 ವರ್ಷದ ಸಂಭ್ರಮ, ಚಿಕಾಗೋನಲ್ಲಿ ಸ್ವಾಮಿ ವಿವೇಕಾನಂದರ ಭಾಷಣಕ್ಕೆ 125 ವರ್ಷ ಮತ್ತು ಸಹೋದರಿ ನಿವೇದಿತಾರ 150ನೇ ಜನ್ಮದಿನೋತ್ಸವ ಎಂಬ ಮೂರು ಮಹಾನ್ ಸಮ್ಮೇಳನಗಳ ತ್ರಿವೇಣಿ ಸಂಗಮವಾಗಿದೆ. ಈ ಮೂರೂ ಮಹೋತ್ಸವಗಳ ಕೇಂದ್ರುಬಿಂದು ಸ್ವಾಮಿ ವಿವೇಕಾನಂದ. ನನ್ನ ಜೀವನದ ಮಹತ್ತರ ಪಾತ್ರ ವಹಿಸಿದವರಲ್ಲಿ ಇವರೂ ಒಬ್ಬರು. ವಿವೇಕಾನಂದರು ಕನ್ಯಾಕುಮಾರಿಗೆ ಹೋಗುವ ಮೊದಲು ಕರ್ನಾಟಕದಲ್ಲಿ ಕೆಲವು ದಿನ ತಂಗಿದ್ದರು ಎಂಬುದನ್ನು ಸ್ಮರಿಸಿದರು.
ಮೂರು ವರ್ಷಗಳ ಹಿಂದೆ ಶತಾಯುಷಿ ಶ್ರೀ ಶಿವಕುಮಾರಸ್ವಾಮೀಜಿಯವರ ಆಶೀರ್ವಾದ ಪಡೆಯಲು ತುಮಕೂರಿಗೆ ಬಂದಿದ್ದೆ. ಆಗ ಅಲ್ಲಿಯ ಯುವ ಸಮುದಾಯದಿಂದ ಪ್ರಾಪ್ತವಾಗಿದ್ದ ಸ್ನೇಹ ಇಂದಿಗೂ ಸ್ಮರಣೆಯಲ್ಲಿದೆ ಎಂದ ಮೋದಿ, ಶಿವಕುಮಾರ ಸ್ವಾಮೀಜಿಯವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಆರೋಗ್ಯ, ಭಾಗ್ಯ, ದೀರ್ಘಾಯುಷ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸಿದರು.
ಸರ್ಕಾರಿ ಪ್ರವಾಸದ ಮೇಲೆ ದೆಹಲಿಗೆ ವಿದೇಶದ ಅತಿಥಿಗಳು ಆಗಮಿಸಿರುವ ಕಾರಣ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಖುದ್ದಾಗಿ ಬರಲು ಸಾಧ್ಯವಾಗದೇ ತಾಂತ್ರಿಕ ಮಾಧ್ಯಮದ ಮೂಲಕ ಭಾಗವಹಿಸಿದ್ದರು. ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.