ರಾಷ್ಟ್ರೀಯ

ವೇತನ ನೀಡಲು ಕಾಸಿಲ್ಲ: ನೀರವ್‌ ಮೋದಿ

Pinterest LinkedIn Tumblr


ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವ ನೀರವ್ ಮೋದಿ, ತನ್ನಿಂದ ವೇತನ ನೀಡಲು ಆಗುತ್ತಿಲ್ಲ, ಹೀಗಾಗಿ ತಮ್ಮ ಸಂಸ್ಥೆ ತೊರೆದು ಬೇರೆ ಕೆಲಸ ನೋಡಿಕೊಳ್ಳುವಂತೆ ನೌಕರರಿಗೆ ಸೂಚಿಸಿದ್ದಾರೆ. ಇದಕ್ಕಾಗಿ ನೌಕರರಲ್ಲಿ ಕ್ಷಮೆ ಯಾಚಿಸುವುದಾಗಿಯೂ ಹೇಳಿದ್ದಾರೆ.

ಸದ್ಯ ಬೆಲ್ಜಿಯಂನಲ್ಲಿ ವಾಸವಿರುವ ಮೋದಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಇ ಮೇಲ್ ಕಳುಹಿಸಿದ್ದು, ಪ್ರಸಕ್ತ ಪರಿಸ್ಥಿತಿಯಲ್ಲಿ ವೇತನ ನೀಡಲು ಸಾದ್ಯವಿಲ್ಲ, ಹಾಗಾಗಿ ಬೇರೆ ಕೆಲಸ ನೋಡಿಕೊಳ್ಳಿ’ ಎಂದು ಹೇಳಿರುವುದಾಗಿ ಹಿಂದುಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

‘ಈಗಾಗಲೇ ಅಧಿಕಾರಿಗಳು ನಮ್ಮ ಕಂಪನಿಯಲ್ಲಿದ್ದ ಸ್ಟಾಕ್‌ಗಳನ್ನು ಜಪ್ತಿ ಮಾಡಿದ್ದಾರೆ, ಅಲ್ಲದೇ ಬ್ಯಾಂಕ್‌ ಖಾತೆ ಕೂಡಾ ಸ್ಥಗಿತಗೊಂಡಿದೆ. ಹೀಗಾಗಿ ನಿಮ್ಮ ವೇತನ ಪಾವತಿ ಮಾಡಲಾಗುತ್ತಿಲ್ಲ. ಆದರೆ ಒಂದು ಬಾರಿ ಈ ಎಲ್ಲಾ ಪ್ರಕರಣಗಳು ಇತ್ಯರ್ಥಗೊಂಡ ಬಳಿಕ ಬಾಕಿ ಮೊತ್ತವನ್ನು ನೀಡುತ್ತೇನೆ’ ಎಂದು ಮೋದಿ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಪ್ರಕರಣದಿಂದ ಮುಕ್ತಗೊಂಡರೆ ಮತ್ತೆ ಎಲ್ಲಾ ನೌಕರರನ್ನು ಕರೆಸಿಕೊಂಡು ಅವರ ಜತೆಯೇ ಕೆಲಸ ಮಾಡುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಪಂಗನಾಮ ಹಾಕಿ ಪಲಾಯನ ಮಾಡಿರುವ ಮೋದಿಯ ಎರಡನೇ ಪತ್ರ ಇದಾಗಿದೆ.

ತನಿಖೆಯ ಮುಂದುವರಿದ ಭಾಗವಾಗಿ ಈಗಾಗಲೇ ಉದ್ಯಮಿಗೆ ಸೇರಿದ 5,700 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದಿನ ವರದಿಗಳ ಪ್ರಕಾರ ಮೋದಿ ಪಿಎನ್‌ಬಿ ಬ್ಯಾಂಕ್‌ಗೆ 11,300 ಕೋಟಿ ರೂ ವಂಚನೆ ಮಾಡಿದ್ದಾರೆ .

Comments are closed.