
ದೆಹಲಿ: ಕೇರಳದ ಹದಿಯಾ-ಶಫೀನ್ ಜಹಾನ್ ಲವ್ ಜಿಹಾದ್ ಪ್ರಕರಣದ ಕುರಿತ ನಾಳಿನ ಆಲಿಕೆಯನ್ನು ಮುಂದೂಡಬೇಕೆಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಪ್ರಕರಣದ ಕೇಂದ್ರ ಬಿಂದುವಾಗಿರುವ ಹದಿಯಾ ತಂದೆ ಈ ಕುರಿತಂತೆ ಸಲ್ಲಿಸಿದ ಮನವಿಯನ್ನು ಸುಪ್ರೀಂ ತಳ್ಳಿಹಾಕಿದೆ. ನಿಖಾವನ್ನ ಅಸಿಂಧುಗೊಳಿಸಿದ್ದ ಕೇರಳ ಹೈ ಕೋರ್ಟ್ ಆದೇಶದ ವಿರುದ್ಧ ಶಫೀನ್ ಜಹಾನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ.
ತನ್ನ ಪತಿಯನ್ನು ಬೆಂಬಲಿಸಿರುವ ಹದಿಯಾ ಈ ಕುರಿತಂತೆ 26 ಪುಟಗಳ ಅಫಿಡವಿಟ್ ಒಂದನ್ನು ಸುಪ್ರೀಂನಲ್ಲಿ ಸಲ್ಲಿಸಿದ್ದಾಳೆ.
ವಿವಾಹದ ಮುನ್ನ ಅಖಿಲಾ ಆಗಿದ್ದ ಹದಿಯಾಳನ್ನು ಹಾದಿ ತಪ್ಪಿಸಿರುವ ಶಫೀನ್ ಜಹಾನ್ ಇಸ್ಲಾಂಗೆ ಮತಾಂತರಗೊಳಿಸಿ ನಿಖಾ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದ ಹದಿಯಾ ತಂದೆ ನ್ಯಾಯಾಲಯ ಮೆಟ್ಟಿಲೇರಿದ್ದರು.
ಸ್ವ ಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿರುವ 24 ಹರೆಯದ ಹದಿಯಾ ಮುಸ್ಲಿಂ ಆಗಿಯೇ ಮುಂದಿನ ಜೀವನ ನಡೆಸುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾಳೆ. ತನ್ನನ್ನು ಮತಾಂತರಗೊಳಿಸುವಲ್ಲಿ ಜಹಾನ್‌ನದ್ದು ಯಾವುದೇ ಪಾತ್ರವಿಲ್ಲ ಎಂದಿರುವ ಹದಿಯಾ ಆತ ತನ್ನ ಬಾಳಲ್ಲಿ ಬರುವ ಮುನ್ನವೇ ಇಸ್ಲಾಂಗೆ ಮತಾಂತರಗೊಂಡಿದ್ದಾಗಿ ಹದಿಯಾ ಹೇಳಿಕೊಂಡಿದ್ದಾಳೆ.
ಇದಕ್ಕೂ ಮುನ್ನ ತಂದೆಯ ಸುಪರ್ದಿಯಿಂದ ಹೊರಬಂದು ತಮಿಳುನಾಡಿನ ಅರೆ ವೈದ್ಯಕೀಯ ಕಾಲೇಜಿನಲ್ಲಿ ತನ್ನ ಶಿಕ್ಷಣ ಮುಂದುವರೆಸಲು ಹದಿಯಾಗೆ ಸುಪ್ರೀಂ ಕೋರ್ಟ್ ಅನುವು ಮಾಡಿಕೊಟ್ಟಿತ್ತು. ತನ್ನ ಕುಟುಂಬದಿಂದ ಆಚೆ ಬರಲು ಅವಕಾಶ ಮಾಡಿಕೊಡಬೇಕೆಂದು ಹದಿಯಾ ಕೋರ್ಟ್‌ನಲ್ಲಿ ಬೇಡಿಕೊಂಡಿದ್ದಳು.
Comments are closed.