ರಾಷ್ಟ್ರೀಯ

ಗುಜರಾತ್‌ ಪೌರಾಡಳಿತ ಚುನಾವಣೆ: ಬಿಜೆಪಿ ಮೇಲುಗೈ, ಕಾಂಗ್ರೆಸ್‌ಗೂ ಖುಷಿ

Pinterest LinkedIn Tumblr


ಗಾಂಧಿನಗರ: 2017ರ ವಿಧಾನಸಭೆ ಚುನಾವಣೆಯ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಬಿಜೆಪಿ, ಗುಜರಾತ್‌ನ 75 ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ 47ರಲ್ಲಿ ಅಧಿಕಾರ ಉಳಿಸಿಕೊಂಡಿದೆ.

ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಈ ಬಾರಿ ತನ್ನ ಗಳಿಕೆಯನ್ನು ದ್ವಿಗುಣಗೊಳಿಸಿದೆ. 2013ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇವಲ 8 ಮುನಿಸಿಪಾಲಿಟಿಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 13 ನಗರಾಡಳಿತ ಸಂಸ್ಥೆಗಳನ್ನು ಗೆದ್ದುಕೊಂಡಿದೆ.

2013ರ ಚುನಾವಣೆಯಲ್ಲೂ ಬಿಜೆಪಿ ಒಟ್ಟು 75 ಮುನಿಸಿಪಾಲಿಟಿಗಳ ಪೈಕಿ 47 ಮುನಿಸಿಪಾಲಿಟಿಗಳನ್ನು ಗೆದ್ದಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ತವರು ವಡ್ನಗರ ಮುನಿಸಿಪಾಲಿಟಿಯನ್ನೂ ಬಿಜೆಪಿ ಅನಾಯಾಸವಾಗಿ ಗೆದ್ದಿದೆ.

ಸ್ಪಷ್ಟ ಬಹುಮತವಿಲ್ಲದ 10 ಮುನಿಸಿಪಾಲಿಟಿಗಳಲ್ಲಿ ಅಧಿಕಾರದ ಗದ್ದುಗೆಗೆ ಪಕ್ಷೇತರರನ್ನೇ ಅವಲಂಬಿಸಿಬೇಕಿದ್ದು, ಎರಡೂ ಪಕ್ಷಗಳು ಪಕ್ಷೇತರರ ಬೆಂಬಲ ತಮಗೇ ಎಂದು ಹೇಳಿಕೊಂಡಿವೆ.

‘ಒಟ್ಟು 75 ಮುನಿಸಿಪಾಲಿಟಿಗಳಲ್ಲಿ ಬಿಜೆಪಿ 47, ಕಾಂಗ್ರೆಸ್‌ 16, ಎನ್‌ಸಿಪಿ ಮತ್ತು ಬಿಎಸ್‌ಪಿ ತಲಾ ಒಂದೊಂದು ಮುನಿಸಿಪಾಲಿಟಿಗಳನ್ನು ಗೆದ್ದಿವೆ. ಆರು ಮುನಿಸಿಪಾಲಿಟಿಗಳಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಉಳಿದ ನಾಲ್ಕು ಮುನಿಸಿಪಾಲಿಟಿಗಳಲ್ಲಿ ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ರಾಜ್ಯ ಸುನಾವಣೆ ಆಯುಕ್ತ ವರೇಶ್‌ ಸಿನ್ಹಾ ಹೇಳಿದ್ದಾರೆ.

ಒಟ್ಟು 2060 ಸೀಟುಗಳ ಪೈಕಿ ಬಿಜೆಪಿ 1167, ಕಾಂಗ್ರೆಸ್‌ 630, ಬಿಎಸ್‌ಪಿ 15, ಎನ್‌ಸಿಪಿ 28 ಮತ್ತು ಇತರ ಪಕ್ಷಗಳು 18 ಸೀಟುಗಳನ್ನು ಗೆದ್ದಿವೆ. 202 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ ಎಂದು ಸಿನ್ಹಾ ವಿವರಿಸಿದರು.

Comments are closed.