ರಾಷ್ಟ್ರೀಯ

ಪೊಲೀಸ್‌ ಠಾಣೆಗೆ ನುಗ್ಗಿ ಬಲವಂತವಾಗಿ ಅತ್ಯಾಚಾರ ಆರೋಪಿಗಳಿಬ್ಬರನ್ನು ಎಳೆದೊಯ್ದು ಹೊಡೆದು ಕೊಂದ ಉದ್ರಿಕ್ತ ಗುಂಪು

Pinterest LinkedIn Tumblr

ದಿಬ್ರೂಗಢ: ಅರುಣಾಚಲದ ಲೋಹಿತ್‌ ಜಿಲ್ಲೆಯಲ್ಲಿ ಸೋಮವಾರ ಸುಮಾರು 800 ಜನರ ಉದ್ರಿಕ್ತ ಗುಂಪೊಂದು ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿ, ಬಂಧಿತ ಅತ್ಯಾಚಾರ ಆರೋಪಿಗಳನ್ನು ಬಿಡಿಸಿಕೊಂಡು ಹೋಗಿ ಹೊಡೆದು ಸಾಯಿಸಿದ ಘಟನೆ ವರದಿಯಾಗಿದೆ.

ಬೆಳಗ್ಗೆ 11:30ರ ಸುಮಾರಿಗೆ ತೇಜು ಪೊಲೀಸ್‌ ಠಾಣೆಯ ಹೊರಗೆ ಜಮಾಯಿಸಿದ ಗುಂಪು ಸಂಜು ಸೋಬೊರ್‌ (30) ಮತ್ತು ಜಗದೀಶ್‌ ಲೋಹಾರ್ (25) ಎಂಬ ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಆಗ್ರಹಿಸಿತು. ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದಲ್ಲಿ ಸೋಬೊರ್‌ ಬಂಧಿತನಾಗಿದ್ದರೆ, ಅಪರಾಧಕ್ಕೆ ನೆರವಾದ ಆರೋಪದಲ್ಲಿ ಲೋಹಾರ್‌ನನ್ನು ಬಂಧಿಸಲಾಗಿತ್ತು.

ಬಂಧಿತ ಆರೋಪಿಗಳನ್ನು ಗುಂಪಿನ ವಶಕ್ಕೆ ಒಪ್ಪಿಸಲು ಪೊಲೀಸರು ನಿರಾಕರಿಸಿದಾಗ, ಗುಂಪು ಠಾಣೆಯಲ್ಲಿ ದಾಂಧಲೆ ನಡೆಸಿದರು. ಬಳಿಕ ಪೊಲೀಸರ ಮೇಲೆ ಬಲಪ್ರಯೋಗ ನಡೆಸಿ ಲಾಕಪ್‌ ಒಡೆದು ಆರೋಪಿಗಳನ್ನು ಬಿಡಿಸಿಕೊಂಡು ಮಾರುಕಟ್ಟೆ ಪ್ರದೇಶದತ್ತ ಎಳೆದೊಯ್ದರು. ಅನಂತರ ಇಬ್ಬರನ್ನೂ ಹೊಡೆದು ಸಾಯಿಸಿ ಶವಗಳನ್ನು ಕೂಡುರಸ್ತೆಯಲ್ಲಿ ಎಸೆದು ಜಾಗ ಖಾಲಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದು ಲೋಹಿತ್ ಜಿಲ್ಲಾಧಿಕಾರಿ ಕರ್ಮಾ ಲೇಕಿ, ಪೂರ್ವ ವಲಯದ ಡಿಐಜಿ ಅಪುರ್‌ ಬಿತಿನ್ ಮತ್ತು ಲೋಹಿತ್ ಎಸ್‌ಪಿ ಇಸಾಕ್‌ ಪರ್ಟಿನ್‌ ಅವರು ತೇಜು ಪಟ್ಟಣಕ್ಕೆ ಧಾವಿಸಿದ್ದಾರೆ. ‘ಘಟನೆ ಕುರಿತ ವಿಸ್ತೃತ ತನಿಖೆಗೆ ಆದೇಶಿಸಿದ್ದೇವೆ. ಅದು ಉದ್ರಿಕ್ತ ಗುಂಪಿನ ಕೃತ್ಯವಾಗಿದ್ದು, ನಮ್ಮ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಏನೂ ಮಾಡಲಾಗಲಿಲ್ಲ. ಇದುವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ಎಸ್‌ಪಿ ತಿಳಿಸಿದರು.

ವಾಕ್ರೋ ಕಂದಾಯ ವಲಯದ ನಾಮ್‌ಗೊ ಗ್ರಾಮದ ಐದು ವರ್ಷದ ಬಾಲಕಿ ಫೆಬ್ರವರಿ 12ರಂದು ನಾಪತ್ತೆಯಾಗಿದ್ದಳು. ಶೋಧ ನಡೆಸಿದಾಗ ಛಿದ್ರಗೊಂಡಿರುವ ಮಗುವಿನ ನಗ್ನ ದೇಹ ಆಕೆಯ ಮನೆಯಿಂದ 400 ಮೀಟರ್‌ ದೂರದಲ್ಲಿರುವ ತೋಟದಲ್ಲಿ ಫೆಬ್ರವರಿ 17ರಂದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳ ಪತ್ತೆಗೆ ಫೆಬ್ರವರಿ 18ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದಂತೆ ಸಂಜಯ್‌ ಸೊಬೋರ್ ಮತ್ತು ಜಗದೀಶ್‌ ಲೋಹಾರ್‌ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಬಳಿಕ ಇಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿತ್ತು.

ಆರೋಪಿಗಳಿಬ್ಬರೂ ಚಹಾ ತೋಟದ ಕಾರ್ಮಿಕರಾಗಿದ್ದು, ಬಾಲಕಿಗೆ ಆಮಿಷವೊಡ್ಡಿ ಅತ್ಯಾಚಾರವೆಸಗಿದ್ದಾಗಿ ಆರೋಪಿ ಸೋಬೊರ್‌ ಒಪ್ಪಿಕೊಂಡಿದ್ದ. ಬಾಲಕಿ ಅಳಲಾರಂಭಿಸಿದಾಗ ಲೋಹಾರ್‌ನ ಕೈಲಿದ್ದ ಮಚ್ಚು ತೆಗೆದುಕೊಂಡು ಬಾಲಕಿಯ ತಲೆ ಕತ್ತರಿಸಿದ್ದಾಗಿ ಸೋಬೋರ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

Comments are closed.