ರಾಷ್ಟ್ರೀಯ

ಇಂಟರ್‌ಸಿಟಿ ರಾತ್ರಿ ರೈಲುಗಳ ವೇಗ ಶೀಘ್ರವೇ 250 ಕಿ.ಮೀ.ಗೆ ಹೆಚ್ಚಳ

Pinterest LinkedIn Tumblr


ಹೊಸದಿಲ್ಲಿ: ರಾತ್ರಿ ಪಯಣದ ಇಂಟರ್‌ಸಿಟಿ ರೈಲುಗಳು ಹೈಸ್ಪೀಡ್‌ ಕಾರಿಡಾರ್‌ಗಳ ಮೂಲಕ ಇನ್ನು ಮುಂದೆ ಗಂಟೆಗೆ 200ರಿಂದ 250 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಇದೇ ಏಪ್ರಿಲ್‌ನಲ್ಲಿ ರೈಲುಗಳ ವೇಗ ಹೆಚ್ಚಳ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ.

ವೇಗದ ರೈಲುಗಳ ಓಡಾಟಕ್ಕೆ ಹೈಸ್ಪೀಡ್‌ ಕಾರಿಡಾರ್‌ಗಳನ್ನು ಗುರುತಿಸುವಂತೆ ಹಾಗೂ ನಿರ್ಮಾಣ ವೆಚ್ಚವನ್ನು ಅರ್ಧಕ್ಕಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ರೈಲ್ವೇ ಮಂಡಳಿಗೆ ಸಚಿವರು ಸೂಚಿಸಿದ್ದಾರೆ.

2018ರ ಏಪ್ರಿಲ್‌ ವೇಳೆಗೆ 10,000 ಕಿ.ಮೀ ಹೈಸ್ಪೀಡ್‌ ಕಾರಿಡಾರ್‌ಗಳನ್ನು ಸಚಿವರು ಘೋಷಿಸಲಿದ್ದಾರೆ. ಈ ಕಾರಿಡಾರ್‌ಗಳಲ್ಲಿ ರೈಲುಗಳು ಗಂಟೆಗೆ 200ರಿಂದ 250 ಕಿ.ಮೀ ವೇಗದಲ್ಲಿ ಓಡಲಿವೆ. ರಾತ್ರಿ ಪಯಣಿಸುವ ರೈಲುಗಳು ಈ ವೇಗವನ್ನು ಸಾಧಿಸಿಬಿಟ್ಟರೆ ಆ ಮಾರ್ಗಗಳಲ್ಲಿ ಗಂಟೆಗೆ 350 ಕಿ.ಮೀ ಅಥವಾ ಹೆಚ್ಚಿನ ವೇಗದ ಬುಲೆಟ್‌ ಟ್ರೈನ್‌ಗಳ ಅಗತ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.

‘ರೈಲುಗಳು ಸಕಾಲದಲ್ಲಿ ಗಮ್ಯಸ್ಥಾನ ತಲುಪಿದರೆ ಪ್ರಯಾಣಿಕರು ತಮ್ಮ ಮನೆ ತಲುಪಿದ ಬಳಿಕ ಕಚೇರಿಗಳಿಗೆ ತೆರಳಲೂ ಸಾಕಷ್ಟು ಸಮಯಾವಕಾಶ ಸಿಗುತ್ತದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಹೈಸ್ಪೀಡ್‌ ಹಳಿಗಳ ನಿರ್ಮಾಣದ ವೆಚ್ಚವನ್ನು ಅರ್ಧಕ್ಕಿಂತಲೂ ಕಡಿಮೆಗೆ ತಗ್ಗಿಸಲು ರೈಲ್ವೇ ಇಲಾಖೆ ಗುರಿ ಹಾಕಿಕೊಂಡಿದೆ. ಪ್ರಸ್ತುತ ಪ್ರತಿ ಕಿ.ಮೀಗೆ 100 ಕೋಟಿ ರೂ ವೆಚ್ಚವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಒಂಟಿ ಸ್ತಂಭಗಳನ್ನು ನಿರ್ಮಿಸಿ ಅವುಗಳ ಮೇಲೆ ದ್ವಿಮಾರ್ಗ ಹಳಿಗಳನ್ನು ಹಾಕುವ ಪ್ರಸ್ತಾಪ ಅಥವಾ ರೈಲ್ವೇ ಭೂಮಿಯಲ್ಲೇ ನಿರ್ಮಿಸುವ ಸಾಧ್ಯತೆಗಳನ್ನು ಶೋಧಿಸುವಂತೆ ಸಚಿವಾಲಯ ಸೂಚಿಸಿದೆ.

‘ನೂತನ ಕಾಯ್ದೆ ಜಾರಿಯಾದ ಬಳಿಕ ಯಾವುದೇ ಯೋಜನೆಗೆ ಭೂಸ್ವಾಧೀನದ ವೆಚ್ಚ ಗಣನೀಯವಾಗಿ ತಗ್ಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಸ್ತುತ ಮುಂಬಯಿ-ಪುಣೆ ನಡುವಣ ಪ್ರಯಾಣಕ್ಕೆ ಮೂರು ಗಂಟೆ ಸಮಯ ತಗಲುತ್ತದೆ. ಅದನ್ನು ಒಂದು ಅಥವಾ ಒಂದೂವರೆಗೆ ಗಂಟೆಗೆ ತಗ್ಗಿಸಲು ಸಾಧ್ಯವಾದರೆ ಹತ್ತಿರದ ನಗರಗಳ ನಡುವಣ ಪ್ರಯಾಣಕ್ಕೆ ಜನತೆ ವಿಮಾನಕ್ಕಿಂತ ರೈಲನ್ನು ಅವಲಂಬಿಸಬಹುದು. ಹೀಗಾಗಿ ಹೈಸ್ಪೀಡ್ ರೈಲುಗಳ ಅಗತ್ಯವಿದೆ ಎಂದು ಅಧಿಕಾರಿ ನುಡಿದರು.

Comments are closed.