ರಾಷ್ಟ್ರೀಯ

ಪ್ರತಿ ತಿಂಗಳೂ ಲಕ್ಷ ಕೋಟಿ ರೂ.ಜಿಎಸ್‌ಟಿ ಸಂಗ್ರಹ ನಿರೀಕ್ಷೆ

Pinterest LinkedIn Tumblr


ಹೊಸದಿಲ್ಲಿ: ಮುಂದಿನ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ ಪ್ರತಿ ತಿಂಗಳೂ 1 ಲಕ್ಷ ಕೋಟಿ ರೂ.ಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ತೆರಿಗೆ ಮಾಹಿತಿಯ ಹೊಂದಾಣಿಕೆ, ಇ-ವೇ ಬಿಲ್‌ನಂಥ ತೆರಿಗೆ ವಂಚನೆ ನಿಗ್ರಹದ ಕ್ರಮಗಳನ್ನು ಸರಕಾರ ಜಾರಿಗೊಳಿಸಿದೆ. ಇದರಿಂದ ತೆರಿಗೆ ಸಂಗ್ರಹ ಗಣನೀಯವಾಗಿ ಏರಿಕೆಯಾಗಲಿದೆ. ಒಂದು ಸಲ ಜಿಎಸ್‌ಟಿ ರಿಟರ್ನ್ಸ್‌ ದಾಖಲಿಸುವ ವ್ಯವಸ್ಥೆಯು ಸ್ಥಿರಗೊಂಡರೆ, ತೆರಿಗೆ ವಂಚನೆಗೆ ತೆರೆ ಬೀಳಲಿದೆ. ಈ ಎಲ್ಲ ಪ್ರಕ್ರಿಯೆಗಳಿಂದಾಗಿ ತಲಾ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಪ್ರತಿ ತಿಂಗಳೂ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಜಿಎಸ್‌ಟಿಯಿಂದ 7.44 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ ಎಂದು ಬಜೆಟ್‌ನಲ್ಲಿ ಸರಕಾರವು ಅಂದಾಜು ಮಾಡಿದೆ. ಏಪ್ರಿಲ್‌ 1ರಿಂದ ಹೊಸ ಹಣಕಾಸು ವರ್ಷ ಜಾರಿಗೆ ಬರಲಿದ್ದು ಜುಲೈ-ಫೆಬ್ರವರಿ ವರೆಗಿನ 8 ತಿಂಗಳಲ್ಲಿ 4.44 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹದ ಗುರಿ ಹೊಂದಲಾಗಿದೆ.

ಕಳೆದ ವರ್ಷದ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬಂದಿದ್ದು ಮೊದಲ ತಿಂಗಳು 95,000 ಕೋಟಿ ರೂ., ಆಗಸ್ಟ್‌ನಲ್ಲಿ 91,000 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 92,150 ಕೋಟಿ ರೂ., ಅಕ್ಟೋಬರ್‌ನಲ್ಲಿ 83,000 ಕೋಟಿ ರೂ., ನವೆಂಬರ್‌ನಲ್ಲಿ 80,808 ಕೋಟಿ ರೂ. ಮತ್ತು ಡಿಸೆಂಬರ್‌ನಲ್ಲಿ 86,703 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

Comments are closed.