ರಾಷ್ಟ್ರೀಯ

ನೋಟು ನಿಷೇಧಕ್ಕೂ ಮುನ್ನ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ಹಣ ಎಲ್ಲಿಗೆ ಹೋಯ್ತು?

Pinterest LinkedIn Tumblr

ನವದೆಹಲಿ: ನೋಟು ನಿಷೇಧಕ್ಕೂ ಮುನ್ನ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ರು. ಮೌಲ್ಯದ ಹಣಕ್ಕೆ ಲೆಕ್ಕ ಸಿಗುತ್ತಿಲ್ಲ ಎಂಬ ಸ್ಫೋಟಕ ಮಾಹಿತಿ ಹಕ್ಕು ಕಾಯ್ದೆ ಮೂಲಕ ಹೊರಬಿದ್ದಿದೆ.

ಮಾಹಿತಿ ಹಕ್ಕು ಹೋರಾಟಗಾರ ಮನೋರಂಜನ್ ರಾಯ್ ಎಂಬುವವರು ಸಲ್ಲಿಕೆ ಮಾಡಿದ್ದಿ ಅರ್ಜಿ ಮೂಲಕ ಇಂತಹುದೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಬೃಹತ್ ಪ್ರಮಾಣದಲ್ಲಿ ಭಾರತೀಯ ಕರೆನ್ಸಿ ನೋಟುಗಳು ನಾಪತ್ತೆಯಾಗಿರುವ ಅಥವಾ ಹೆಚ್ಚುವರಿಯಾಗಿರುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ ನಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯನ್ನಾಧರಿಸಿ 2015ರಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, 2000ರಿಂದ 2011ರ ಮಧ್ಯೆ ಆರ್‌ಬಿಐ ನ ನಾಸಿಕ್, ದೇವಸ್ ಮತ್ತು ಮೈಸೂರಿನಲ್ಲಿರುವ ಮೂರು ನೋಟು ಮುದ್ರಣಾಲಯಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಕರೆನ್ಸಿ ನೋಟುಗಳನ್ನು ಪಡೆದುಕೊಂಡಿತ್ತು ಎಂಬುದು ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿಯಲ್ಲಿ ತಿಳಿದು ಬಂದಿರುವುದಾಗಿ ರಾಯ್ ತಿಳಿಸಿದ್ದಾರೆ.

ಆದರೆ ಈ ಮುದ್ರಣ ಸಂಸ್ಥೆಗಳಲ್ಲಿ ಮುದ್ರಿಸಲಾಗಿರುವ ಕರೆನ್ಸಿ ನೋಟುಗಳ ಸಂಖ್ಯೆಗೂ ಮತ್ತು ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಈ ವೇಳೆ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ರೂ. ಮೌಲ್ಯದ ಕರೆನ್ಸಿ ಹಣದ ಲೆಕ್ಕ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಮಾಹಿತಿ ಹಕ್ಕು ಹೋರಾಟಗಾರ ರಾಯ್ ಅವರು ತಿಳಿಸಿರುವಂತೆ ಆರ್ ಬಿಐ ಅಂಕಿ ಅಂಶಗಳ ಪ್ರಕಾರ ಮುದ್ರಣ ಸಂಸ್ಥೆಗಳು, ರೂ. 500 ಮುಖಬೆಲೆಯ 19,45,40,00,000 ನೋಟುಗಳನ್ನು ಮುದ್ರಿಸಿ ಆರ್‌ ಬಿಐಗೆ ಕಳುಹಿಸಿರುವುದಾಗಿ ತಿಳಿಸಿದೆ. ಆದರೆ ಆರ್‌ ಬಿಐ ತಾನು ಕೇವಲ 18,98,46,84,000 ನೋಟುಗಳನ್ನು ಮಾತ್ರ ಪಡೆದಿರುವುದಾಗಿ ತನ್ನ ಅಂಕಿ ಅಂಶಗಳಲ್ಲಿ ತಿಳಿಸಿದೆ. ಅಂದರೆ 500 ರೂ. ಮುಖಬೆಲೆಯ 46,93,16,000 ನೋಟುಗಳು ಅಥವಾ 23,464 ಕೋಟಿ ರೂ. ಮೌಲ್ಯದ ಹಣ ಕಡಿಮೆ ಎಂದು ಮಾಹಿತಿಯಿಂದ ತಿಳಿದು ಬರುತ್ತದೆ.

ಅಲದೆ ಇದೇ ವೇಳೆ, ರೂ. 1000 ಮುಖಬೆಲೆಯ 4,44,13,00,000 ನೋಟುಗಳನ್ನು ಮುದ್ರಿಸಿರುವುದಾಗಿ ಮುದ್ರಣ ಸಂಸ್ಥೆಗಳು ತಿಳಿಸಿದ್ದು, ಆರ್‌ಬಿಐ ಅಂಕಿಅಂಶಗಳ ಪ್ರಕಾರ 4,45,30,00,000 ನೋಟುಗಳನ್ನು ಪಡೆದಿರುವುದಾಗಿ ತಿಳಿಸುತ್ತದೆ. ಅಂದರೆ 1,17,00,000 ನೋಟುಗಳು ಅಥವಾ 1,170 ಕೋಟಿ ರೂ. ಹೆಚ್ಚುವರಿಯಾಗಿದೆ ಎಂದು ಮಾಹಿತಿ ಹಕ್ಕಿನ ಮೂಲಕ ಪಡೆದ ಅಂಕಿಅಂಶಗಳು ಹೇಳುತ್ತವೆ ಎಂದು ರಾಯ್ ಹೇಳಿದ್ದಾರೆ.

2000-2011ರ ಅವಧಿಗೆ ಪಡೆದ ಮಾಹಿತಿ ಹಕ್ಕು ಅಂಕಿಅಂಶಗಳ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ. ಲಿ. ರೂ. 500 ಮುಖಬೆಲೆಯ 13,35,60,00,000 ನೋಟುಗಳು ಮತ್ತು ರೂ.1000 ಮುಖ ಬೆಲೆಯ 3,35,48,60,000 ನೋಟುಗಳನ್ನು ಆರ್‌ ಬಿಐಗೆ ಕಳುಹಿಸಿರುವುದಾಗಿ ತಿಳಿಸಿದ್ದು, ಆದರೆ ಆರ್‌ಬಿಐ ಈ ನೋಟುಗಳನ್ನು ಪಡೆಯಲೇ ಇಲ್ಲ ಅಥವಾ ಈ ಬಗ್ಗೆ ಯಾವುದೇ ವಿವರಗಳನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ವಿವಿಧ ಸಂಸ್ಥೆಗಳು ನೀಡಿರುವ ಭಿನ್ನ ಅಂಕಿಅಂಶಗಳ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ರಾಯ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಜವಾಬ್ದಾರಿಯುತ ಸಂಸ್ಥೆಗಳು ಹೇಗೆ ಈ ರೀತಿ ವಿಭಿನ್ನ ಅಂಕಿಅಂಶಗಳನ್ನು ನೀಡಲು ಸಾಧ್ಯ? ಈ ಅವ್ಯವಹಾರದ ಹಿಂದೆ ಇರುವ ಅಪರಾಧಿಗಳಾದರೂ ಯಾರು? ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮುದ್ರಣಗೊಂಡಿರುವ ನೋಟುಗಳು ಹೋಗುವುದಾದರೂ ಎಲ್ಲಿಗೆ? ಎಂದು ರಾಯ್ ಪ್ರಶ್ನಿಸಿದ್ದು, ಅಂತೆಯೇ ರಾಯ್ ತಮ್ಮ ಅರ್ಜಿಯಲ್ಲಿ ಪ್ರಧಾನ ಮಂತ್ರಿ, ವಿತ್ತ ಸಚಿವರು ಮತ್ತು ಗೃಹ ವ್ಯವಹಾರಗಳ ಸಚಿವಾಲಯವನ್ನು ಹೆಸರಿಸಿದ್ದಾರೆ. ಈ ಬಗ್ಗೆ ನಡೆದ ಹಿಂದಿನ ವಿಚಾರಣೆಯ ವೇಳೆ ಅಂದಿನ ಅಡಿಶನಲ್ ಸಾಲಿಸಿಟರ್-ಜನರಲ್ ಆಫ್ ಇಂಡಿಯಾ ಅನಿಲ್ ಸಿಂಗ್ ಅವರು, ಪ್ರಕರಣದಿಂದ ಪ್ರಧಾನಿ, ವಿತ್ತ ಸಚಿವ ಹಾಗೂ ಸಚಿವಾಲಯದ ಹೆಸರನ್ನು ಕೈಬಿಡುವಂತೆ ಮನವಿ ಮಾಡಿದ್ದರು.

ಇದೀಗ ಮನೋರಂಜನ್ ರಾಯ್ ಬಾಂಬೆ ಹೈ ಕೋರ್ಟ್ ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು ನವೆಂಬರ್ 8, 2016ರಂದು ನಡೆದ ಐತಿಹಾಸಿಕ ನೋಟು ನಿಷೇಧದ ಮೇಲೆ ಸಾಕಷ್ಟು ಬೆಳಕು ಚೆಲ್ಲುವ ನಿರೀಕ್ಷೆಯಿದ್ದು, ಆರ್ ಟಿಐ ಕಾರ್ಯಕರ್ತ ಅರ್ಜಿಯಲ್ಲಿ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ತನ್ನ ಅರ್ಜಿಯ ವಿಚಾರಣೆಯ ಮೂಲಕ ಉತ್ತರ ದೊರೆಯಲಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಆರ್ ಬಿಐ ನ ಮುದ್ರಣಾಲಯದಿಂದ ಸಿಬ್ಬಂದಿಯೊಬ್ಬರೇ ಹೊಸ ನೋಟುಗಳ ಕಂತೆಯನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದಾಗಿದೆ.

Comments are closed.