ರಾಷ್ಟ್ರೀಯ

ಅಯೋಧ್ಯೆ ವಿವಾದ: ದಾಖಲಾತಿಗಳ ಭಾಷಾಂತರಕ್ಕೆ ಸುಪ್ರೀಂ ಸೂಚನೆ

Pinterest LinkedIn Tumblr


ಹೊಸದಿಲ್ಲಿ: ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ವಿವಾದ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಎಲ್ಲ ದಾಖಲಾತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ, ಎರಡು ವಾರದೊಳಗೆ ತನಗೆ ಒದಗಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಪ್ರಕರಣ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ವಿಶೇಷ ಪೀಠ, ಮುಂದಿನ ವಿಚಾರಣೆಯನ್ನು ಮಾರ್ಚ್‌ 14ರಂದು ನಡೆಸುವುದಾಗಿ ತಿಳಿಸಿತು. ಇದೇ ವೇಳೆ, ದಿನವಹಿ ಆಧಾರದ ಮೇಲೆ ವಿಚಾರಣೆ ನಡೆಸುವ ಇರಾದೆ ತನಗಿಲ್ಲ ಎಂದೂ ಸ್ಪಷ್ಟ ಪಡಿಸಿದೆ.

ಇದನ್ನೊಂದು ‘ಪಕ್ಕಾ ಭೂ ವಿವಾದ’ ಎಂದು ಪರಿಗಣಿಸಲಾಗುವುದು ಎಂದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಸ್‌ ಎ ನಜೀರ್‌ ಒಳಗೊಂಡ ಪೀಠ, ಪ್ರತ್ಯೇಕ ಖಟ್ಲೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನಂತರ ಕೈಗೆತ್ತಿಕೊಳ್ಳುವ ಸೂಚನೆ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಾದೇಶಿಕ ಭಾಷೆಯ ಎಲ್ಲಾ ದಾಖಲಾತಿಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಎರಡು ವಾರದೊಳಗೆ ತನಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ತನ್ನ ರಿಜಿಸ್ಟ್ರಿಗೆ ಆದೇಶ ನೀಡಿತು. ಇದಕ್ಕೆ ಸಂಬಂಧಿಸಿದ ವಿಡಿಯೊ ಪ್ರತಿಗಳನ್ನು ಕೂಡ ಒದಗಿಸುವಂತೆ ಸೂಚಿಸಿದೆ.

ನಾಲ್ಕು ನಾಗರಿಕ ಖಟ್ಲೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಒಟ್ಟು 14 ಮೇಲ್ಮನವಿಗಳು ಸಲ್ಲಿಕೆಯಾಗಿವೆ.

Comments are closed.