ರಾಷ್ಟ್ರೀಯ

1 ಗಂಟೆ ಮಾತಾಡಿದ್ರೂ ರಾಫೆಲ್ ಬಗ್ಗೆ ಏನೂ ಹೇಳಿಲ್ಲ? ಮೋದಿಗೆ ರಾಹುಲ್

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಲೋಕಸಭೆ ಕಲಾಪದಲ್ಲಿ ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಮತ್ತೆ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ, ಆದರೆ ಉದ್ಯೋಗ ಸೃಷ್ಠಿಯ ಬಗ್ಗೆಯಾಗಲಿ, ರೈತರು ಹಾಗೂ ರಾಫೆಲ್ ಯುದ್ಧ ವಿಮಾನ ಖರೀದಿ ಕುರಿತು ಯಾಕೆ ಏನನ್ನೂ ಹೇಳಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿಯವರು ಒಂದು ತಾಸು ಮಾತನಾಡಿದರೂ ಕೂಡಾ ರಾಫೇಲ್ ಡೀಲ್ ಬಗ್ಗೆ ಮಾತೇ ಆಡಿಲ್ಲ ಎಂದು ರಾಹುಲ್ ತಿರುಗೇಟು ನೀಡಿದ್ದಾರೆ.

ನನ್ನ ಎಣಿಕೆಯ ಪ್ರಕಾರ ಈಗ ಅವರು ದೇಶದ ಪ್ರಧಾನಿ ಎಂಬುದನ್ನು ಮರೆತಿರಬೇಕು. ಅವರು ಪ್ರಧಾನಿಯಾಗಿ ಪ್ರಶ್ನೆಗಳಿಗೆ ಉತ್ತರ ಕೊಡಬೇಕೇ ವಿನಃ ಪ್ರತಿ ಬಾರಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸೋದು ಅಲ್ಲ. ಇದು ಬರೇ ರಾಜಕೀಯ ಭಾಷಣ ವಿನಃ ಬೇರೇನೂ ಅಲ್ಲ ಎಂದು ಹೇಳಿದರು.

-ಉದಯವಾಣಿ

Comments are closed.