ರಾಷ್ಟ್ರೀಯ

ನಮ್ಮ ದೇಶದಲ್ಲಿ ಗಂಭೀರ ಸಮಸ್ಯೆಯಿದೆ: ಬಹ್ರೇನ್‌ನಲ್ಲಿ ರಾಹುಲ್ ಗಾಂಧಿ

Pinterest LinkedIn Tumblr


ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಗಾದಿಗೇರಿರುವ ರಾಹುಲ್ ಗಾಂಧಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಹೊರ ದೇಶದಲ್ಲಿ ಹೋಗಿ ಭಾರತವನ್ನು ದೂರುವ ಮೂಲಕ ವಿವಾದವನ್ನು ಎಳೆದುಕೊಂಡಿದ್ದಾರೆ.

ಬಹ್ರೇನ್‌ನಲ್ಲಿ ಸೋಮವಾರ ಸುಮಾರು 50 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ “ಭಾರತೀಯ ಮೂಲದ ಜನರ ಜಾಗತಿಕ ಸಮಾವೇಶ”ದಲ್ಲಿ, ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ 47ರ ಹರೆಯದ ಕಾಂಗ್ರೆಸ್ ಮುಖಂಡ ರಾಹುಲ್, ಪ್ರಧಾನಿ ನರೇಂದ್ರ ಮೋದಿಯವರ ಮೇಲೆಯೂ ಕಿಡಿ ಕಾರಿದರು.

“ನೀವು ನಮ್ಮ ದೇಶಕ್ಕೆ ಎಷ್ಟು ಮುಖ್ಯ ಎಂದು ಹೇಳಲು ನಾನಿಲ್ಲಿ ಬಂದಿರುವೆ. ನಮ್ಮ ದೇಶದಲ್ಲಿ ಗಂಭೀರ ಸಮಸ್ಯೆಯಿದೆ, ಆ ಸಮಸ್ಯೆಯ ಪರಿಹಾರದ ಭಾಗ ನೀವು ಎಂದು ಹೇಳಲು ನಾನು ಇಲ್ಲಿಗೆ ಬಂದಿರುವೆ” ಎಂದು ಹೇಳಿದ ರಾಹುಲ್, ಜಗತ್ತಿನ ಎಲ್ಲೆಡೆ ಇರುವ ನಿಮ್ಮ ಮತ್ತು ತವರಿನ ನಡುವಿನ ಸೇತುವೆಯಾಗಲು ನಾನಿಲ್ಲಿ ಬಂದಿರುವೆ ಎಂದೂ ಹೇಳಿದರು.
ಕಾಂಗ್ರೆಸ್ ಮುಖ್ಯಸ್ಥರಾದ ಬಳಿಕ ಮಾಡಿದ ಮೊದಲ ವಿದೇಶೀ ಭಾಷಣದಲ್ಲಿ ರಾಹುಲ್, ಭಾರತದ ಯುವಕರು ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಡುತ್ತಾ, ಬಿಜೆಪಿ ನೇತೃತ್ವದ ಸರಕಾರವು ಅದರ ದುರ್ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಜಾತಿ ಮತ್ತು ಧರ್ಮದ ಆಧಾರದಲ್ಲಿ ಕೇಂದ್ರ ಸರಕಾರವು ಜನರನ್ನು ವಿಭಜಿಸುತ್ತಿದೆ. ನಿರುದ್ಯೋಗಿ ಯುವಜನತೆಯ ಆತಂಕವನ್ನು ಎರಡು ಸಮುದಾಯಗಳ ನಡುವಿನ ದ್ವೇಷವಾಗಿ ಪರಿವರ್ತಿಸುತ್ತಿದೆ ಎಂದು ರಾಹುಲ್ ಕಿಡಿ ಕಾರಿದರು.

ಕಾಂಗ್ರೆಸ್‌ನಲ್ಲಿ ನಾಟಕೀಯ ಬದಲಾವಣೆಗಳಾಗಲಿವೆ ಎಂದು ಮುನ್ಸೂಚನೆ ನೀಡಿದ ರಾಹುಲ್, ಮುಂದಿನ ಆರು ತಿಂಗಳಲ್ಲಿ ಹೊಸ ಹೊಳಪಿನ ಕಾಂಗ್ರೆಸ್ ಪಕ್ಷವನ್ನು ತೋರಿಸುವುದಾಗಿ ಹೇಳಿದರು. ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣ – ಇವು ಪ್ರಮುಖ ಆದ್ಯತೆಗಳು ಎಂದೂ ಅವರು ಹೇಳಿದರು.

ರಾಹುಲ್ ಗಾಂಧಿ ಈ ಹಿಂದೆಯೂ ವಿದೇಶದಲ್ಲಿ ಹೋಗಿ ಮೋದಿ ಸರಕಾರವನ್ನು ಟೀಕಿಸಿದ್ದರು. ಮೋದಿಯವರನ್ನು ಅನುಸರಿಸಿ ಅವರಂತೆಯೇ ವಿದೇಶಕ್ಕೆ ಹೋದಾಗಲೆಲ್ಲ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಏರ್ಪಡಿಸುತ್ತಿರುವ ಅವರು, ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕ ಪ್ರವಾಸದಲ್ಲಿರುವಾಗ ಸರಕಾರದ ನೀತಿಗಳನ್ನು ದೂಷಿಸಿದ್ದರು. ಆದರೆ ನರೇಂದ್ರ ಮೋದಿ ಅವರ ಸಂವಹನ ಕೌಶಲ್ಯವನ್ನು ಮೆಚ್ಚಿದ್ದರು ಮತ್ತು ತಮ್ಮ ಪಕ್ಷದಲ್ಲಿ ಅದರ ಕೊರತೆಯನ್ನು ಒಪ್ಪಿಕೊಂಡಿದ್ದರು.

Comments are closed.