ರಾಷ್ಟ್ರೀಯ

ಪ್ರಜಾಪ್ರಭುತ್ವ & ಸಂವಿಧಾನಕ್ಕೆ ಮೋದಿ ಕಂಟಕ: ಜಿಗ್ನೇಶ್‌ ಮೇವಾನಿ

Pinterest LinkedIn Tumblr

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಷ್ಟ್ರದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಂಟಕ ಎಂದು ದಲಿತ ನಾಯಕ, ಗುಜರಾತ್‌ನ ಶಾಸಕ ಜಿಗ್ನೇಶ್‌ ಮೇವಾನಿ ಆರೋಪಿಸಿದ್ದಾರೆ. ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ, ಸಂಸತ್ತಿನ ಬೀದಿಯಲ್ಲಿ ಕಾಣಿಸಿಕೊಂಡ ಮೇವಾನಿ ಮತ್ತು 18 ಕಾಲೇಜು ವಿದ್ಯಾರ್ಥಿಗಳು ‘ಯುವ ಹೂಂಗಾರ’ ರ‍್ಯಾಲಿ ನಡೆಸಲು ಯತ್ನಿಸಿದರು.

ಗುಜರಾತ್‌ ವಡಗಾಮ್‌ ಕ್ಷೇತ್ರದಿಂದ ಆಯ್ಕೆಯಾಗಿರುವ ಮೇವಾನಿ ನೇತೃತ್ವದ ‘ಯುವ ಹೂಂಕಾರ’ ರ‍್ಯಾಲಿಗೆ ದಿಲ್ಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ಸಂಸತ್‌ ಭವನದ ರಸ್ತೆಯಲ್ಲಿ ‘ಗುಜರಾತ್‌ ಮಾದರಿ ರಾಜಕೀಯ’ ಮಾದರಿ ಎಂಬ ವಿಚಾರವನ್ನಿಟ್ಟುಕೊಂಡು ರ‍್ಯಾಲಿ ನಡೆಸಲು ಮುಂದಾಗಿದ್ದರು. ಗಣರಾಜ್ಯೋತ್ಸವ ಹಿನ್ನೆಲೆ ಅಹಿತಕರ ಘಟನೆ ಸಂಭವಿಸದಂತೆ ನಿಗಾ ವಹಿಸಲು ಅರೆ ಸೇನಾ ಪಡೆ ಯೋಧರು ಸೇರಿದಂತೆ ಸುಮಾರು 2,000 ಭದ್ರತಾ ಸಿಬ್ಬಂದಿಯನ್ನು ದಿಲ್ಲಿಯಲ್ಲಿ ನೇಮಿಸಲಾಗಿದೆ.

‘ಮೋದಿಜಿ ನಾನು ನಿಮ್ಮ ಫಾಲೋ ಮಾಡುತ್ತಿರುವ ಗುಜರಾತಿ, ಇವಾಗ ಶಾಸಕನಾಗಿ, ನಮಗೆ ಭ್ರಷ್ಟಾಚಾರದ ಎಲ್ಲ ದಾಖಲೆಗಳು ಸಿಗುತ್ತವೆ. ಭೀಮ ಸೇನೆ ಸ್ಥಾಪಕ ಚಂದ್ರಶೇಖರ್‌ ಆಜಾದ್‌ ಅವರನ್ನು ಜೈಲಿನಿಂದ ಬಿಡುಗಡೆ ಯಾಕೆ ಮಾಡಿಲ್ಲ ಎಂಬುದನ್ನು ತಿಳಿಸಬೇಕು. ಭ್ರಷ್ಟಾಚಾರ, ಬಡತನ, ನಿರುದ್ಯೋಗಳಂತಹ ನಿಜವಾದ ಸಮಸ್ಯೆಗಳನ್ನು ಮ್ಯಾಟ್‌ನ ಕೆಳಗೆ ಹಾಕಿಕೊಂಡು ಘರ್‌ ವಾಪ್ಸಿ, ಲವ್‌ ಜಿಹಾದ್‌ ಮತ್ತು ಗೋವುಗಳ ವಿಚಾರಗಳಿಗೆ ಮಹತ್ವ ನೀಡುತ್ತಿದ್ದೀರಿ. ನಾವು ಇಂತಹ ನಡೆಗೆ ವಿರುದ್ಧವಾಗಿದ್ದೇವೆ’ ಎಂದು ಮೇವಾನಿ ಹೇಳಿದ್ದಾರೆ.

ಸಂಸತ್ತಿನ ಬೀದಿಯಲ್ಲೇ ಮೇವಾನಿ ಅವರನ್ನು ತಡೆದಿದ್ದೇವೆ. ಗಣರಾಜ್ಯೋತ್ಸವದ ಹಿನ್ನೆಲೆ ಸಂಸತ್ತಿಗೆ ಬಿಗಿಭದ್ರತೆ ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.