ಅಂತರಾಷ್ಟ್ರೀಯ

ಅರಮನೆ ಮುಂದೆ ಪ್ರತಿಭಟನೆ: 11 ಸೌದಿ ರಾಜಕುಮಾರರ ಬಂಧನ

Pinterest LinkedIn Tumblr


ರಿಯಾದ್‌: ವೆಚ್ಚ ಕಡಿತದ ಕ್ರಮಗಳನ್ನು ವಿರೋಧಿಸಿ ರಿಯಾದ್‌ನ ಅರಮನೆ ಮುಂದೆ ಪ್ರತಿಭಟನೆ ನಡೆಸಿದ 11 ಮಂದಿ ರಾಜಕುಮಾರರನ್ನು ಸೌದಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸೌದಿ ಮಾಧ್ಯಮಗಳು ವರದಿ ಮಾಡಿವೆ.

ಜಗತ್ತಿನ ಅತಿದೊಡ್ಡ ತೈಲ ರಫ್ತುದಾರನಾಗಿರುವ ಸೌದಿ ಅರೇಬಿಯಾ, ಇತ್ತೀಚೆಗೆ ಸಬ್ಸಿಡಿಗಳ ಕಡಿತ, ಮೌಲ್ಯ ವರ್ಧಿತ ತೆರಿಗೆ, ರಾಜಕುಟುಂಬದ ಸದಸ್ಯರ ವೆಚ್ಚ ಕಡಿತ ಸೇರಿದಂತೆ ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿತ್ತು. ತೈಲ ಬೆಲೆ ಕುಸಿತದಿಂದ ಆದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸೌದಿ ಸರಕಾರ ಈ ಕ್ರಮಗಳಿಗೆ ಮುಂದಾಗಿದೆ. 2018ರಲ್ಲಿ ಸೌದಿಯ ಬಜೆಟ್‌ ಕೊರತೆ ಅಂದಾಜು 195 ಶತಕೋಟಿ ರಿಯಾಲ್‌ಗಳಷ್ಟಾಗಲಿದೆ.

ಐತಿಹಾಸಿಕ ಅರಮನೆ ಖುಸ್ರ್‌-ಎ-ಹೋಕಂನಲ್ಲಿ ಜಮಾಯಿಸಿದ ರಾಜಕುಮಾರರು, ತಮ್ಮ ಕುಟುಂಬಗಳ ವಿದ್ಯುತ್‌ ಮತ್ತು ನೀರಿನ ಬಿಲ್‌ಗಳ ಪಾವತಿಯನ್ನು ರದ್ದುಪಡಿಸಿದ ಸರಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು ಎಂದು ಆನ್‌ಲೈನ್‌ ಸುದ್ದಿತಾಣ ಸಬ್ಕ್‌.ಒಆರ್‌ಜಿ ವರದಿ ಮಾಡಿತ್ತು. ಕುಟುಂಬದ ಒಬ್ಬ ಸಂಬಂಧಿಗೆ ವಿಧಿಸಲಾದ ಮರಣದಂಡನೆ ರದ್ದುಪಡಿಸುವಂತೆಯೂ ರಾಜಕುಮಾರರು ಒತ್ತಾಯಿಸಿದರು ಎಂದು ಆ ಸುದ್ದಿ ಜಾಲತಾಣ ವರದಿ ಮಾಡಿದೆ.

‘ನಿಮ್ಮ ಬೇಡಿಕೆ ಸರಿಯಲ್ಲ ಎಂದು ಹೇಳಿದರೂ ಪ್ರತಿಭಟನೆ ಕೈಬಿಡಲು ಒಪ್ಪದ ಕಾರಣ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳುವಂತೆ ಅರಮನೆ ಕಾವಲುಗಾರರಿಗೆ ದೊರೆ ಆದೇಶ ನೀಡಿದರು’ ಎಂದು ವರದಿ ತಿಳಿಸಿದೆ.

‘ಕಾನೂನಿನ ಎದುರು ಎಲ್ಲರೂ ಸಮಾನರು. ಸರಕಾರದ ಕಾನೂನು ಮತ್ತು ನಿರ್ದೇಶನಗಳ ಜಾರಿಗೆ ಒಪ್ಪದವರು ಯಾರೇ ಆಗಿದ್ದರೂ ಜೈಲು ಸೇರಬೇಕಾಗುತ್ತದೆ’ ಎಂದು ವೆಬ್‌ತಾಣದ ವರದಿ ಹೇಳಿದೆ.

ಸೌದಿಯ ಪಟ್ಟಾಭಿಷಿಕ್ತ ಯುವ ದೊರೆ ಮೊಹಮ್ಮದ್‌ ಬಿನ್ ಸಲ್ಮಾನ್‌ ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಭಾರೀ ಸಮರ ಘೋಷಿಸಿ ರಾಜಮನೆತನದ 12ಕ್ಕೂ ಹೆಚ್ಚು ಪ್ರಭಾವಿ ಸದಸ್ಯರನ್ನು ಬಂಧಿಸಿ ಜೈಲಿಗಟ್ಟಿದ್ದರು.

Comments are closed.