ಹೊಸದಿಲ್ಲಿ: ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿದ್ದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಲುನವಾಡಾದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮೋದಿ, ದೇಶದ ಎಲ್ಲಾ ಭಾಗದಲ್ಲಿ ಮುಸ್ಲಿಂ ಮೀಸಲಾತಿ ನೀಡುವುದಾಗಿ ಹೇಳಿ ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತಾ ಬಂದಿದೆ, ಆದರೆ ಅವರ ಪಕ್ಷ ಆಡಳಿತ ನಡೆಸುವ ಯಾವುದೇ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿಲ್ಲ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮ್ ಅವರ ‘ಪ್ರಧಾನಿ ಯಾರ ಮಗ? ಎಂಬ ಪ್ರಶ್ನೆಗೆ ಉತ್ತರಿಸಿರುವ ಮೋದಿ, ನನ್ನನ್ನು ಪದೇ ಪದೇ ಹೀಯಾಳಿಸುವ, ನನ್ನ ಬಡ ಕುಟುಂಬವನ್ನು ಅಣಕಿಸುವ, ನನ್ನ ಪಾಲಕರು ಯಾರೆಂದು ಕೇಳುವ ಎಲ್ಲ ಕಾಂಗ್ರೆಸ್ ನಾಯಕರೇ ಒಂದು ಮಾತು ನೆನಪಿಡಿ, ನನಗೆ ಈ ದೇಶವೇ ಸರ್ವಸ್ವ, ನನ್ನ ಬದುಕಿನ ಪ್ರತಿ ಘಳಿಗೆಯೂ ಈ ದೇಶಕ್ಕೆ ಹಾಗೂ 125 ಕೋಟಿ ಜನರಿಗೆ ಅರ್ಪಣೆಯಾಗಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ನಿಜಾಮಿ ಎಂಬ ಯುವ ಕಾಂಗ್ರೆಸ್ ನಾಯಕ, ತಮ್ಮ ಟ್ವಿಟ್ಟರ್ ನಲ್ಲಿ ‘ರಾಹುಲ್ ಗಾಂಧಿಯವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜೀವ್ ಗಾಂಧಿಯವರ ಪುತ್ರ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಇಂದಿರಾ ಗಾಂಧಿಯವರ ಮೊಮ್ಮಗ. ಅಷ್ಟೇ ಅಲ್ಲ, ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜವಹರಲಾಲ್ ನೆಹರು ಅವರ ಮೊಮ್ಮಗ… ಆದರೆ ಮೋದಿ ಯಾರು…….? ಯಾರ ಮಗ….? ಯಾರ ಮೊಮ್ಮಗ…?’ ಎಂದು ಪ್ರಶ್ನಿಸಿ ಟ್ವಿಟ್ಟಿಗರ ಕೆಂಗಣ್ಣಿಗೂ ಪಾತ್ರರಾಗಿದ್ದರು.