ರಾಷ್ಟ್ರೀಯ

ಕೇರಳದಲ್ಲೊಬ್ಬಳು ಹಾವು ಹಿಡಿವ ಹುಡುಗಿ!

Pinterest LinkedIn Tumblr


ತಿರುವನಂತಪುರಂ: ಪುರುಷ ಪ್ರಧಾನವಾಗಿರುವ ಹಾವು ಹಿಡಿಯುವ ಸವಾಲಿನ ಕ್ಷೇತ್ರದಲ್ಲಿ ಕೇರಳದ ಮಹಿಳೆಯೊಬ್ಬರು ಮಿಂಚುತ್ತಿದ್ದಾರೆ. ಬುಸುಗುಡುವ ನಾಗರಹಾವಿನಿಂದ ಹಿಡಿದು ವಿಷ ಸರ್ಪಗಳವರೆಗೆ ಎಲ್ಲವನ್ನೂ ಅತ್ಯಂತ ಲೀಲಾಜಾಲವಾಗಿ ಮಕ್ಕಳಾಟದಂತೆ ನಿರ್ವಹಿಸುವ ಈ ಧೈರ್ಯವಂತ ಹೆಣ್ಮಗಳ ಹೆಸರು ಜೆ.ಆರ್‌. ರಾಜಿ(33 ವರ್ಷ).

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಪಾಲೋಡ್‌ನ ನನ್ನಿಯೋಬೆ ಗ್ರಾಮದ ನಿವಾಸಿಯಾಗಿರುವ ರಾಜಿಗೆ ಇದೊಂದು ಸಾಮಾಜಿಕ ಸೇವೆ. ಮನೆ ಕೆಲಸ ಮಾಡಿಕೊಂಡೇ ಕರೆದಲ್ಲಿಗೆ ಹೋಗಿ ಹಾವು ಹಿಡಿಯುತ್ತಾರೆ.

ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳ ನಾನಾ ಕಡೆಗಳಿಗೆ ಹಾವು ಹಿಡಿಯಲು ಹೋಗುವ ಅವರು ಕಳೆದ 9 ತಿಂಗಳಲ್ಲಿ 119 ಹಾವುಗಳನ್ನು ರಕ್ಷಿಸಿದ್ದಾರೆ. ಅದೆಷ್ಟೋ ಸಂದರ್ಭದಲ್ಲಿ ವಿಷ ಸರ್ಪಗಳಿಂದ ಕಚ್ಚಿಸಿಕೊಳ್ಳುವ ಅಪಾಯದಿಂದ ತಪ್ಪಿಸಿಕೊಂಡಿದ್ದರೂ ತಮ್ಮ ಹವ್ಯಾಸವನ್ನು ಬಿಟ್ಟಿಲ್ಲ ಎನ್ನುವುದು ಅವರ ಹೆಗ್ಗಳಿಕೆ.

ರಾಜಿಗೆ ಸರೀಸೃಪಗಳೆಂದರೆ ಇಷ್ಟ. ಆ ಕಾರಣಕ್ಕಾಗಿಯೇ ಕುತೂಹಲದಿಂದ ಹಾವು ಹಿಡಿಯಲು ಮುಂದಾದರು. ಈಗ ಪ್ರದೇಶದಲ್ಲಿ ಅವರು ಹಾವು ಹಿಡಿಯೋದರಲ್ಲಿ ಚಾಂಪಿಯನ್‌.

ಅವರು ಇದುವರೆಗೆ 70 ನಾಗರಹಾವು, 11 ವಿಷ ಸರ್ಪಗಳು, 7 ಹೆಬ್ಬಾವುಗಳು ಮತ್ತು ಇತರ ಹಲವಾರು ಸ್ಥಳೀಯ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಡಿಗ್ರಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಬಿಟ್ಟಿರುವ ಅವರು ಇನ್ನೂ ಕಾಳಿಂಗ ಸರ್ಪವನ್ನು ಹಿಡಿದಿಲ್ಲವಂತೆ.

ಹಾವು ಹಿಡಿಯುವ ವಿಷಯದಲ್ಲಿ ಒಂದು ದಿನದ ಕೋಚಿಂಗ್‌ ಕ್ಲಾಸ್‌ಗೆ ಹೋಗಿರುವುದು ಬಿಟ್ಟರೆ ಬೇರೆ ಯಾವ ತರಬೇತಿಯೂ ಇಲ್ಲ.

ಶಾಲೆಗೆ ಹೋಗುವ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ರಾಜಿ ಅವರನ್ನು ಕರೆ ಬಂದಲ್ಲಿಗೆ ಕರೆದುಕೊಂಡು ಹೋಗುವುದು ಪತಿಯೇ.

”ಹಾವು ಹಿಡಿದಿದ್ದಕ್ಕೆ ಹಣ ಕೇಳುವುದಿಲ್ಲ. ಡೊನೇಷನ್‌ ಅಂತ ಯಾರಾದರೂ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಬಡವರು, ಹಿರಿಯರ ಕೈಯಿಂದ ಯಾವತ್ತೂ ಒಂದು ಪೈಸೆಯೂ ತೆಗೆದುಕೊಂಡಿಲ್ಲ,” ಎನ್ನುತ್ತಾರೆ ರಾಜಿ.

ವೃತ್ತಿಯಲ್ಲಿ ಚಾಲಕಿಯೂ ಆಗಿರುವ ರಾಜಿ ಜೀಪ್‌ ಮತ್ತು ಪಿಕಪ್‌ ವ್ಯಾನ್‌ ಕೂಡಾ ಓಡಿಸುತ್ತಾರೆ.

ನಮ್ಮದು ಕಾಡು ಪ್ರದೇಶ, ಸಣ್ಣ ವಯಸ್ಸಿನಿಂದಲೇ ಹಾವುಗಳನ್ನು ನೋಡುತ್ತಾ ಬೆಳೆದಿರುವುದರಿಂದ ಅವುಗಳ ಬಗ್ಗೆ ಭಯವೇನೂ ಇರಲಿಲ್ಲ, ಬದಲಾಗಿ ಅವುಗಳನ್ನು ಮುಟ್ಟಬೇಕೆಂಬ ತುಡಿತವಿತ್ತು. ಹಾಗಾಗಿಯೇ ನಾನು ಹಾವಾಡಗಿತ್ತಿಯಾದೆ.

– ಜೆ.ಆರ್‌. ರಾಜಿ

Comments are closed.