ನವದೆಹಲಿ: ನಿರೀಕ್ಷೆಯಂತೆಯೇ ವಿಧ್ವಂಸಕ ಚಂಡಮಾರುತ ಒಖಿ ಲಕ್ಷ ದ್ವೀಪಕ್ಕೆ ಅಪ್ಪಳಿಸಿದ್ದು, ಚಂಡಮಾರುತ ಪ್ರತೀ ಗಂಟೆಗೆ 123-130 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷದ್ವೀಪಕ್ಕೆ ಒಖಿ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ನೂರಾರು ಮರಗಳು ಬುಡಮೇಲಾಗಿದ್ದು, ಭಾರಿ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಗ್ಗು ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆಯಾದರೂ ಹಲವು ಪ್ರದೇಶಗಳಲ್ಲಿ ಜನರು ಅಪಾಯಕ್ಕೆ ಸಿಲುಕಿದ್ದಾರೆ. ಹೀಗಾಗಿ ಭಾರತೀಯ ನೌಕಾಪಡೆಯ ಒಟ್ಟು ಐದು ನೌಕೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮೂಲಗಳ ಪ್ರಕಾರ ಭಾರಿ ಮಳೆ ಮತ್ತು ಚಂಡಮಾರುತದ ಪರಿಣಾಮ ಈಗಾಗಲೇ ಲಕ್ಷದ್ವೀಪದ ಕಲ್ಪೇನಿಯಲ್ಲಿ ಐದು ಮೀನುಗಾರಿಕಾ ಬೋಟ್ ಗಳು ಹಾನಿಗೀಡಾಗಿದ್ದು, ಸಮುದ್ರದ ನೀರಿನ ಮಟ್ಟದಲ್ಲೂ ಕೂಡ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವಂತೆ ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪದಲ್ಲಿ ಮತ್ತೆ ಭಾರಿ ಮಳೆ ಸಂಭವಿಸಲಿದೆ ಎಂದು ಹೇಳಿದೆ. ಇನ್ನು ಲಕ್ಷದ್ವೀಪದಲ್ಲಿ ಕಳೆದ 24 ಗಂಟೆಗಳಲ್ಲಿ ಬರೊಬ್ಬರಿ 16 ಸೆಂಮೀ ಮಳೆಯಾಗಿದ್ದು, ಹಲವು ತಗ್ಗು ಪ್ರದೇಶಗಳು ಜಲಾವೃತ್ತವಾಗಿದೆ. ನೂರಾರು ತೆಂಗಿನ ಮರಗಳು ಧರೆಗುರುಳಿದ್ದು, ಹಲವು ಮನೆಗಳು ಧ್ವಂಸಗೊಂಡಿವೆ.
ಇನ್ನು ತಮಿಳುನಾಡಿನಿಂದ ಬಂದಿದ್ದ 12 ಬೋಟ್ ಗಳು ಮೀನುಗಾರಿಕಾ ಬೋಟ್ ಗಳು ಚಂಡಮಾರುತದ ಹೊಡೆಚಕ್ಕೆ ಸಿಲುಕಿ ನಾಪತ್ತೆಯಾಗಿದ್ದವು. ಆದರೆ ಬಳಿಕ ಕಾರ್ಯಾಚರಣೆ ನಡೆಸಿದ ನೌಕಾಪಡೆಯ ನೌಕೆಗಳು 12 ಬೋಟ್ ಗಳಲ್ಲಿದ್ದ 150ಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಿಸಿದೆ ಎನ್ನಲಾಗಿದೆ. ಸಮುದ್ರದಲ್ಲಿ ಸುಮಾರು 6 ರಿಂದ 12 ಅಡಿಗಳ ವರೆಗೂ ರಕ್ಕಸ ಅಲೆಗಳು ಏಳುವ ಸಾಧ್ಯತೆ ಇದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಹಮಾಮಾನ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನು ಲಕ್ಷದ್ವೀಪದ ಬಳಿಕ ಒಖಿ ಚಂಡಮಾರುತ ಉತ್ತರದತ್ತ ಪ್ರಯಾಣ ಬೆಳಸಲಿದೆ ಎಂದು ತಜ್ಞರು ಹೇಳಿದ್ದಾರೆ.