ರಾಷ್ಟ್ರೀಯ

ಹೈದರಾಬಾದ್ ಮೆಟ್ರೋ ರೈಲಿಗೆ ಪ್ರಧಾನಿ ಮೋದಿ ಚಾಲನೆ

Pinterest LinkedIn Tumblr

ಹೈದರಾಬಾದ್: ಬಹು ನಿರೀಕ್ಷಿತ ಹೈದರಾಬಾದ್ ನ ಮೊದಲ ಹಂತದ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.

ಇಂದು ಮಧ್ಯಾಹ್ನ ಮಿಯಾಪುರ್‌ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮೆಟ್ರೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಇಬ್ಬರು ನಾಯಕರು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸಾರ್ವಜನಿಕ ಸೇವೆಗೆ ಮೆಟ್ರೋ ರೈಲು ಅಣಿಯಾಗಲಿದೆ.

ಮೊದಲ ಹಂತದ 30 ಕಿ.ಮೀ. ಮೆಟ್ರೋ ಸಂಚಾರ ಇದಾಗಿದ್ದು, ಒಂದೇ ದಿನದಲ್ಲಿ ಚಾಲನೆ ಸಿಗಲಿರುವ ದೇಶದ ಅತಿ ದೊಡ್ಡ ಮೆಟ್ರೋ ಸಂಚಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ನಾಗೋಲ್‌ನಿಂದ ಮಿಯಾಪುರ್‌ವರೆಗೂ ಮೆಟ್ರೋ ಸಂಚಾರ ನಡೆಸಲಿದೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮೆಟ್ರೋ ಸಂಚರಿಸಲಿದೆ. ಕನಿಷ್ಠ 10ರೂ.ದಿಂದ 60 ರೂ.ವರೆಗೂ ಮೆಟ್ರೋ ಪ್ರಯಾಣ ದರ ನಿಗದಿ ಮಾಡಲಾಗಿದೆ. ನಾಗೋಲ್‌ ಹಾಗೂ ಮಿಯಾಪುರ್‌ ಮಧ್ಯೆ ಒಟ್ಟು 24 ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

2012ರ ಜುಲೈನಲ್ಲಿ ಮೆಟ್ರೋ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಇದೇ ಜುಲೈನಲ್ಲೇ ಮೆಟ್ರೋ ರೈಲು ಸಂಚಾರ ನಡೆಸಬೇಕಿತ್ತು. ಆದರೆ, ಭೂ ಸ್ವಾಧೀನ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ವಿಳಂಬವಾಗಿದೆ.

Comments are closed.