ರಾಷ್ಟ್ರೀಯ

ಕೊಚ್ಚಿ ಲವ್‌ ಜಿಹಾದ್‌: ಮತಾಂತರಕ್ಕೆ ಬಲವಂತ ಮಾಡಿಲ್ಲ, ನಂಗೆ ಗಂಡ ಬೇಕು

Pinterest LinkedIn Tumblr


ಕೊಚ್ಚಿ: ನಾನು ಈಗ ಮುಸ್ಲಿಂ ಆಗಿದ್ದೇನೆ. ನನ್ನನ್ನು ಯಾರೂ ಬಲವಂತದಿಂದ ಮತಾಂತರ ಮಾಡಿಲ್ಲ. ನಾನು ಗಂಡನ ಜತೆಗೆ ಹೋಗಬೇಕು: ಇದು ಅಖಿಲಾ ಅಶೋಕನ್‌ ಅಲಿಯಾಸ್‌ ಹದಿಯಾ ಅವರ ಸ್ಪಷ್ಟ ನುಡಿ.

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕೇರಳದ ಲವ್‌ ಜಿಹಾದ್‌ ಪ್ರಕರಣದ ಕೇಂದ್ರ ಬಿಂದು ಹದಿಯಾ, ಸರ್ವೋಚ್ಚ ನ್ಯಾಯಾಲಯದ ಮುಂದೆ ತನ್ನ ನಿಲುವನ್ನು ತಿಳಿಸುವುದಕ್ಕೆ ದಿಲ್ಲಿಗೆ ಹೋಗುವ ಮುನ್ನ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.

ಕಾರಿನಿಂದ ಇಳಿದು ವಿಮಾನ ನಿಲ್ದಾಣದ ಒಳಗೆ ಹೋಗುತ್ತಿರುವಾಗ ಕಾಯುತ್ತಿದ್ದ ಪತ್ರಕರ್ತರತ್ತ ನೋಡಿ ಬೊಬ್ಬೆ ಹೊಡೆದು ಈ ಮಾತು ಹೇಳಿದರು.

ಸುಪ್ರೀಂ ಕೋರ್ಟ್‌ ನವೆಂಬರ್‌ 27ರಂದು ಹದಿಯಾ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ.

ಅಶೋಕನ್‌ ಅವರ ಪುತ್ರಿಯಾಗಿರುವ ಅಖಿಲಾಳ ವಿವಾಹ 2016ರ ಡಿಸೆಂಬರ್‌ನಲ್ಲಿ ಶೆಫೀನ್‌ ಜಹಾನ್‌ ಜತೆ ನಡೆದಿತ್ತು. ಇದೊಂದು ಬಲವಂತದ ಮತಾಂತರ. ಇದರ ಹಿಂದೆ ಲವ್‌ ಜಿಹಾದ್‌ ಷಡ್ಯಂತ್ರವಿದೆ ಎಂದು ಅಶೋಕನ್‌ ಅರೋಪಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌, ಇದೊಂದು ಲವ್‌ ಜಿಹಾದ್‌ ಪ್ರಕರಣ ಎಂಬ ತೀರ್ಮಾನಕ್ಕೆ ಬಂದು 2017ರ ಮೇಯಲ್ಲಿ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಶೆಫೀನ್‌ ಜಹಾನ್‌ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ್ದರು.

ಸುಪ್ರೀಂಕೋರ್ಟ್‌ ಅಖಿಲಾ ಅಲಿಯಾಸ್‌ ಹದಿಯಾಳನ್ನು ತಂದೆ ಅಶೋಕನ್‌ ಜತೆ ಕಳುಹಿಸಿಕೊಟ್ಟರೂ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು. ರಾಷ್ಟ್ರೀಯ ತನಿಖಾ ದಳ ಆಗಸ್ಟ್‌ 18ರಂದು ಪ್ರಕರಣವನ್ನು ಮರು ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿತು.

ಎನ್‌ಐಎ ನೀಡಿದ ಮೊದಲ ವರದಿಯಲ್ಲಿ ಕೇರಳದಲ್ಲಿ ಹಿಂದೂ ಯುವತಿಯರನ್ನು ಬ್ರೈನ್‌ ವಾಷ್‌ ಮಾಡಿ ಮತಾಂತರ ಮಾಡುವ ಲವ ಜಿಹಾದ್‌ ಪ್ರಕರಣಗಳು ನಡೆಯುತ್ತಿವೆ ಎನ್ನುವುದನ್ನು ಎತ್ತಿ ಹಿಡಿದಿತ್ತು. ಇಂಥ 89 ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿ ನೀಡಿದೆ.

ಈ ನಡುವೆ ಕಳೆದ ವಾರ ಎನ್‌ಐಎ ಹದಿಯಾ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆದರೆ, ಹದಿಯಾ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಸ್ವಯಂ ತಾನೇ ದಾಖಲಿಸಿಕೊಳ್ಳಲು ಬಯಸಿ ನವೆಂಬರ್‌ 27ರ ದಿನವನ್ನು ನಿಗದಿಪಡಿಸಿದೆ.

ಹಾಗಾಗಿ, ಶನಿವಾರ ಹದಿಯಾ ತನ್ನ ತಂದೆ ಜತೆ ಬಿಗಿ ಪೊಲೀಸ್‌ ಭದ್ರತೆಯ ನಡುವೆ ವಿಮಾನದ ಮೂಲಕ ದಿಲ್ಲಿಗೆ ತೆರಳಿದ್ದಾರೆ. ಸೋಮವಾರ ಆಕೆ ಕೋರ್ಟ್‌ನ ಮುಂದೆ ತನ್ನ ಮದುವೆ ಮತ್ತು
ಅದರ ಹಿಂದಿನ ಎಲ್ಲ ಕಥೆಗಳನ್ನು ಬಿಚ್ಚಿಡಲಿದ್ದಾರೆ.

Comments are closed.