ಮನೋರಂಜನೆ

‘ಯಾನ’ದಲ್ಲಿ ಮತ್ತೆ ಒಂದಾದ ಅನಂತ್ ನಾಗ್-ಸುಹಾಸಿನಿ !

Pinterest LinkedIn Tumblr

ಬೆಂಗಳೂರು:ಕನ್ನಡದ ಅತ್ಯಂತ ಪ್ರತಿಭಾವಂತ ನಟ ಅನಂತ್ ನಾಗ್ ಹಾಗು ಬಹು ಭಾಷಾ ನಟಿ ಸುಹಾಸಿನಿ ಒಂದಾಗುತ್ತಿದ್ದಾರೆ. ಗಾಬರಿಗೊಳ್ಳಬೇಡಿ….ಅವರು ಒಂದಾಗುತ್ತಿರುವುದು ಸಿನೆಮಾ ಪರದೆಯ ಮೇಲೆ !

ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌ ಅವರು ನಿರ್ದೇಶನ ಮಾಡುತ್ತಿರುವ ‘ಯಾನ’ ಚಿತ್ರದ ಮೂಲಕ ಅನಂತ್ ನಾಗ್-ಸುಹಾಸಿನಿ ಜೋಡಿ ಮತ್ತೆ ಒಂದಾಗುತ್ತಿದ್ದಾರೆ.

ನಟ ಜೈಜಗದೀಶ್‌ ಮತ್ತು ವಿಜಯಲಕ್ಷ್ಮೀ ಸಿಂಗ್‌ ತಮ್ಮ ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು ನಾಯಕಿಯರನ್ನಾಗಿ ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ವಿಜಯಲಕ್ಷ್ಮೀ ಸಿಂಗ್‌ ಅವರೇ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ “ಸಿಂಪಲ್‌’ ಸುನಿ ಅವರು ಸಂಭಾಷಣೆ ಬರೆದಿದ್ದಾರೆ.

ವಿಜಯಲಕ್ಷ್ಮೀ ಸಿಂಗ್‌ ಮತ್ತು ಜೈಜಗದೀಶ್‌ ಜೊತೆಗೆ ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ಇತ್ತೀಚಿಗೆ ಬಿಡುಗಡೆಗೊಂಡು ಭಾರಿ ಸುದ್ದಿ ಮಾಡಿರುವ ‘ಮಾರ್ಚ್-22 ‘ ಸಿನೆಮಾದ ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಟೀನೇಜ್‌ ಹುಡುಗಿಯರ ಬದುಕನ್ನು ಬಿಂಬಿಸುವ ಈ ಚಿತ್ರದ ಪ್ರೋಮೊ ಸಾಂಗ್ ಅನ್ನು ನಟ ಕಿಚ್ಚ ಸುದೀಪ್ ಅವರು ಕೆಲದಿನಗಳ ಹಿಂದೆ ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು.

ಕರಂ ಚಾವ್ಲಾ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್‌ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಮೊದಲ ಸಿನೆಮಾ ‘ಮಾರ್ಚ್ 22’ ಕರ್ನಾಟಕದ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಸುದ್ದಿ ಮಾಡುವ ಮೂಲಕ ಭರ್ಜರಿ ಪ್ರದರ್ಶನವನ್ನು ಕಂಡಿತ್ತು.

Comments are closed.