ನವದೆಹಲಿ: ತಾಜ್ ಮಹಲ್ ಸಂಬಂಧ ಉತ್ತರ ಪ್ರದೇಶ ಸರ್ಕಾರವನ್ನು ಸೋಮವಾರ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಒಂದೇ ತಾಜ್ ಮಹಲ್ ಇರುವುದು; ನೀವು ಮತ್ತೆ ಅದನ್ನು ಪಡೆಯಲಾಗದು ಎಂದು ಸಿಎಂ ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದೆ.
ತಾಜ್ ಮಹಲ್ ಬಳಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಶ್ವ ವಿಖ್ಯಾತ ಮತ್ತು ವಿಶ್ವದ ಅದ್ಬುತ ನಿರ್ಮಾಣಗಳಶಲ್ಲಿ ಒಂದಾಗಿರುವ ತಾಜ್ ಮಹಲ್ ರಕ್ಷಣೆಗೆ ಸರ್ಕಾರ ಯಾವುದೇ ರೀತಿಯ ದೂರದೃಷ್ಟಿ ಹೊಂದಿಲ್ಲ ಎಂದು ಕಾಣುತ್ತದೆ ಎಂದು ಕಿಡಿಕಾರಿದೆ. ವಿಶ್ವದ ಅದ್ಬುತ ನಿರ್ಮಾಣಗಳಲ್ಲಿ ಒಂದಾಗಿರುವ ತಾಜ್ ಮಹಲ್ ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ..ಒಮ್ಮೆ ತಾಜ್ ಮಹಲ್ ನಿರ್ನಾಮವಾದರೆ ಅದನ್ನು ಮತ್ತೆ ನಿರ್ಮಿಸಲು ಅಸಾಧ್ಯ.. ಇರುವುದು ಒಂದೇ ತಾಜ್ ಮಹಲ್ ಎಂದು ಹೇಳಿದೆ.
ಅಂತೆಯೇ ತಾಜ್ ಮಹಲ್ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವ ನೀಡಿದಂತಿಲ್ಲ. ನಗರದಲ್ಲಿ ಕಸ ನಿರ್ವಹಣೆ ಸರಿಯಾಗಿಲ್ಲ, ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಐತಿಹಾಸಿಕ ಕಟ್ಟಡಕ್ಕೆ ಹಾನಿಯಾಗುತ್ತದೆ. ತಾಜ್ ಟ್ರೆಪೆಜಿಯಮ್ ವಲಯ ಟಿಟಿಜೆಡ್ ನಿಂದ ವರದಿ ಕೈ ಸೇರಿದ ಬಳಿಕ ತಾಜ್ ಮಹಲ್ ಬಳಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಸ್ಥಳೀಯ ನಿವಾಸಿಗಳಿಗೆ ಹೊರತು ಪಡಿಸಿ ಅನ್ಯರಿಗೆ ಮತ್ತು ಪ್ರವಾಸಿಗರ ವಾಹನಗಳಿಗೆ ತಾಜ್ ಮಹಲ್ ಪ್ರಾಂತ್ಯದಲ್ಲಿ ಪ್ರವೇಶವಿಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.