ರಾಷ್ಟ್ರೀಯ

ನಿಲೇಕಣಿ ದಂಪತಿಯಿಂದ 5,525 ಕೋಟಿ ರೂ. ದಾನ

Pinterest LinkedIn Tumblr


ಹೊಸದಿಲ್ಲಿ: ಇನ್ಫೋಸಿಸ್‌ನ ಸಹ ಸಂಸ್ಥಾಪಕ ಹಾಗೂ ಹಾಲಿ ಕಾರ‍್ಯಕಾರಿಯೇತರ ಅಧ್ಯಕ್ಷರಾಗಿರುವ ನಂದನ್‌ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ತಮ್ಮ ಸಂಪತ್ತಿನ ಅರ್ಧ ಭಾಗವನ್ನು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.

ಅಮೆರಿಕದ ಮೈಕ್ರೊಸಾಫ್ಟ್‌ ಕಂಪನಿಯ ಸ್ಥಾಪಕ ಬಿಲ್‌ ಗೇಟ್ಸ್‌ ಮತ್ತು ಹೂಡಿಕೆದಾರ ವಾರೆನ್‌ ಬಫೆಟ್‌ ಆರಂಭಿಸಿರುವ ‘ದಿ ಗಿವಿಂಗ್‌ ಪ್ಲೆಡ್ಜ್‌’ ನೆರವು ಅಭಿಯಾನಕ್ಕೆ ತಮ್ಮ ದೇಣಿಗೆ ನೀಡಲು ನಿಲೇಕಣಿ ದಂಪತಿ ತೀರ್ಮಾನಿಸಿದ್ದಾರೆ. ವಿಶ್ವದ ನಾನಾ ಶ್ರೀಮಂತರು ಈ ಅಭಿಯಾನದಡಿಯಲ್ಲಿ ಕೈ ಜೋಡಿಸಿದ್ದು, ತಮ್ಮ ಸಂಪತ್ತಿನ ಬಹುಪಾಲನ್ನು ಕೊಡುಗೆಯಾಗಿ ನೀಡುವ ವಾಗ್ದಾನ ಕೊಟ್ಟಿದ್ದಾರೆ.

ದಾನಕ್ಕೆ ಸಂಬಂಧಿಸಿ ನಂದನ್‌ ನಿಲೇಕಣಿಯವರ ಸಹಿ ಇರುವ ಪತ್ರವನ್ನು ಗಿವಿಂಗ್‌ ಪ್ಲೆಡ್ಜ್‌ನ ವೆಬ್‌ಸೈಟ್‌ ಪ್ರಕಟಿಸಿದೆ. ಫೋರ್ಬ್ಸ್‌ ವರದಿಯ ಪ್ರಕಾರ ನಂದನ್‌ ನಿಲೇಕಣಿಯವರ ಸಂಪತ್ತು 1.7 ಶತಕೋಟಿ ಡಾಲರ್‌ (ಅಂದರೆ ಸುಮಾರು 11,050 ಕೋಟಿ ರೂ.) ಇದರಲ್ಲಿ ಅರ್ಧ ಎಂದರೆ ಸುಮಾರು 5,525 ಕೋಟಿ ರೂ.ಗಳನ್ನು ನಿಲೇಕಣಿಯವರು ಗಿವಿಂಗ್‌ ಪ್ಲೆಡ್ಜ್‌ಗೆ ನೀಡುವ ನಿರೀಕ್ಷೆ ಇದೆ.

ಏನಿದು ಗಿವಿಂಗ್‌ ಪ್ಲೆಡ್ಜ್‌?

ಬಿಲ್‌ಗೇಟ್ಸ್‌ ದಂಪತಿ ಮತ್ತು ವಾರೆನ್‌ ಬಫೆಟ್‌ ಅವರು 2010ರಲ್ಲಿ ಆರಂಭಿಸಿದ ಗಿವಿಂಗ್‌ ಪ್ಲೆಡ್ಜ್‌ ಅಭಿಯಾನವು ವಿಶ್ವಾದ್ಯಂತ ಶ್ರೀಮಂತರನ್ನು ಸಂಪರ್ಕಿಸಿ, ತಮ್ಮ ಅರ್ಧದಷ್ಟು ಸಂಪತ್ತನ್ನು ಸಮಾಜ ಕಲ್ಯಾಣ ಯೋಜನೆಗಳಿಗೆ ದಾನವಾಗಿ ನೀಡುವಂತೆ ಮನವೊಲಿಸುತ್ತದೆ. ಈಗಾಗಲೇ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಸೇರಿದಂತೆ ಹಲವಾರು ಮಂದಿ ಸಿರಿವಂತರು ಈ ಅಭಿಯಾನದ ಜತೆಗೆ ಕೈ ಜೋಡಿಸಿದ್ದಾರೆ. ಇದುವರೆಗೆ 21 ದೇಶಗಳಿಗೆ ಸೇರಿದ 171 ಮಂದಿ ಶ್ರೀಮಂತರು ತಮ್ಮ ಅರ್ಧದಷ್ಟು ಸಂಪತ್ತು ನೀಡುವ ವಾಗ್ದಾನವನ್ನು ನೀಡಿದ್ದಾರೆ. ಭಾರತ, ಅಮೆರಿಕ, ಆಸ್ಪ್ರೇಲಿಯಾ, ಜರ್ಮನಿ, ಇಸ್ರೇಲ್‌, ಸೌದಿ ಅರೇಬಿಯಾ, ರಷ್ಯಾ, ಇಂಡೊನೇಷ್ಯಾ, ಮಲೇಷ್ಯಾದಿಂದಲೂ ಸಿರಿವಂತರು ಕೈ ಜೋಡಿಸಿದ್ದಾರೆ.

ನಿಲೇಕಣಿ ದಂಪತಿ ಈ ಸಂಬಂಧ ಬರೆದಿರುವ ಪತ್ರದಲ್ಲಿ, ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ ಎಂಬ ಭಗವದ್ಗೀತೆಯ ಸಂದೇಶವನ್ನು ಸ್ಮರಿಸಿದ್ದು, ದಾನ ನೀಡಲು ಇದುವೇ ಪ್ರೇರಣೆ ಎಂದಿದ್ದಾರೆ. ಬಿಲ್‌ ಗೇಟ್ಸ್‌ ಅವರು ಟ್ವಿಟರ್‌ ಮೂಲಕ ನಂದನ್‌ ನಿಲೇಕಣಿ ದಂಪತಿಯನ್ನು ಅಭಿನಂದಿಸಿದ್ದಾರೆ.

ನಾಲ್ಕನೆಯವರು

ಅಪಾರ ಹಣ ದಾನ ನೀಡುವ ಕುರಿತು ನಿಲೇಕಣಿ ದಂಪತಿ ಗಿವಿಂಗ್‌ ಪ್ಲೆಡ್ಜ್‌ಗೆ ಸಹಿ ಹಾಕಿದ ನಾಲ್ಕನೆಯವರು. ಈ ಮೊದಲು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಮತ್ತು ಶೋಭಾ ಡೆವಲಪರ್ಸ್‌ನ ಗೌರವಾಧ್ಯಕ್ಷ ಪಿ.ಎನ್‌.ಸಿ ಮೆನನ್‌ ಸಹಿ ಹಾಕಿದ್ದಾರೆ.

Comments are closed.