ಹೊಸದಿಲ್ಲಿ: ಚಿತ್ರ ನಿರ್ಮಾಪಕರ ಕುಟುಂಬದ ಮಹಿಳೆಯರು ದಿನಕ್ಕೊಬ್ಬ ಪತಿಯನ್ನು ಬದಲಿಸುತ್ತಿರುತ್ತಾರೆ. ಹಾಗಾಗಿ ಅವರಿಗೆ, ಆತ್ಮಗೌರವಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಕಟ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಸಂಸದರೊಬ್ಬರು ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದುಷ್ಟ ಮನಸ್ಥಿತಿ ಹೊಂದಿದ ಚಿತ್ರ ನಿರ್ಮಾಪಕರನ್ನು ಚಪ್ಪಲಿಯಲ್ಲಿ ಹೊಡೆಯುವುದಾಗಿಯೂ ಸಂಸದ ಚಿಂತಾಮಣಿ ಮಾಳವೀಯ ಬೆದರಿಕೆ ಒಡ್ಡಿದ್ದಾರೆ.
‘ರಾಣಿ ಪದ್ಮಿನಿ’ ಕುರಿತು ಹಿಂದಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ತೆಗೆಯುತ್ತಿರುವ ‘ಪದ್ಮಾವತಿ’ ಚಿತ್ರದ ವಿರುದ್ಧ ಕೇಳಿಬರುತ್ತಿರುವ ಫೇಸ್‌ಬುಕ್ ಗರ್ಜನೆಗೆ ಮಾಳವೀಯ ದನಿಗೂಡಿಸಿದ್ದಾರೆ.
ರಾಣಿ ಪದ್ಮಿನಿಯು ಪಕ್ಕದ ರಾಜ್ಯದ ರಾಜ ಅಲ್ಲಾವುದ್ದೀನ್ ಖಿಲ್ಜಿ ತಮ್ಮ ರಾಜ್ಯವನ್ನು ವಶಪಡಿಸಿಕೊಂಡಾಗ ಆತನ ಕೈವಶವಾಗುವುದನ್ನು ತಪ್ಪಿಸಿಕೊಳ್ಳಲು ಬೆಂಕಿಗೆ ಹಾರಿ ಪ್ರಾಣ ತೆತ್ತಿದ್ದಳು ಎಂಬ ಕತೆಯಿದೆ. ಆದರೆ, ಚಿತ್ರದಲ್ಲಿ ಖಿಲ್ಜಿ ಹಾಗೂ ಪದ್ಮಾವತಿ ನಡುವೆ ರೊಮ್ಯಾನ್ಸ್ ನಡೆಯುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಚಿತ್ರಕ್ಕೆ ವಿರೋಧ ವ್ಯಕ್ತ ಪಡಿಸಿವೆ.
”ಈ ದೇಶವು ರಾಣಿ ಪದ್ಮಿನಿಗೆ ಅವಮಾನಿಸುವುದನ್ನು ಸಹಿಸುವುದಿಲ್ಲ. ನಮ್ಮ ಹೆಮ್ಮೆಯ ಇತಿಹಾಸಕ್ಕೆ ಧಕ್ಕೆ ತರುವುದನ್ನು ಒಪ್ಪಲಾಗುವುದಿಲ್ಲ,” ಎಂದು ಮಾಳವೀಯ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಚಿತ್ರವು ಡಿ.1ರಂದು ಬಿಡುಗಡೆಯಾಗಲಿದೆ.
ಇತಿಹಾಸ ತಿರುಚಿದ್ದರೆ, ಪದ್ಮಾವತಿ ಬಿಡುಗಡೆಗೆ ಆಸ್ಪದವಿಲ್ಲ: ಬಿಜೆಪಿ ಶಾಸಕಿ
‘ಪದ್ಮಾವತಿ’ ಚಿತ್ರದಲ್ಲಿ ಇತಿಹಾಸ ತಿರುಚಿದ್ದು ಖಚಿತವಾದರೆ, ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಶಾಸಕಿ, ಜೈಪುರ ರಾಜಮನೆತನದ ಮಾಜಿ ಸದಸ್ಯೆ ದಿಯಾ ಕುಮಾರಿ ಹೇಳಿದ್ದಾರೆ.
”ಚಿತ್ರ ನಿರ್ದೇಶಕರು, ಇತಿಹಾಸಕಾರರ ಬಳಿ ಚರ್ಚಿಸಿ ಸತ್ಯವರಿತು ಅದಕ್ಕೆ ತಕ್ಕಂತೆ ಕತೆ ನಿರ್ಮಾಣ ಮಾಡಬೇಕು. ಯಾವ ಚಿತ್ರಗಳೂ ಐತಿಹಾಸಿಕ ಸತ್ಯಗಳನ್ನು ತಿರುಚಿ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಕೂಡದು,” ಎಂದು ಶಾಸಕಿ ಸಲಹೆ ನೀಡಿದ್ದಾರೆ.