ರಾಷ್ಟ್ರೀಯ

ಮಗುವ ಅಪಹರಿಸಿ ಪತ್ನಿಯಲ್ಲಿ ಐದು ಲಕ್ಷ ಒತ್ತೆ ಹಣಕ್ಕೆ ಬೇಡಿಕೆ

Pinterest LinkedIn Tumblr


ಚೆನ್ನೈ: ತನ್ನದೇ ಮಗುವನ್ನು ಅಪಹರಿಸಿ ಬಳಿಕ ಪತ್ನಿಗೆ ಕರೆ ಮಾಡಿ ಐದು ಲಕ್ಷ ಒತ್ತೆ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರವಿಕುಮಾರ್‌ ತನ್ನ ಮಗು ಗಣೇಶ್‌ನನ್ನು ಕರೆದುಕೊಂಡು ಬರಲು ಪ್ಲೇ ಹೋಂಗೆ ಹೋಗಿದ್ದು, ಅರ್ಧ ಗಂಟೆಯ ಬಳಿಕ ಪತ್ನಿ ತಮಿಳ್‌ ಇಳಕಿಯ ಅವರಿಗೆ ಕರೆ ಮಾಡಿದ್ದಾನೆ.

ಆಟೊದಲ್ಲಿ ಬಂದ ಗ್ಯಾಂಗ್‌ ನನ್ನ ಮೇಲೆ ದಾಳಿ ನಡೆಸಿ ಮಗುವನ್ನು ಅಪಹರಿಸಿಕೊಂಡು ಹೋಯಿತು. ಐದು ಲಕ್ ರೂ. ನೀಡಿದರೆ ಮಗುವನ್ನು ಬಿಟ್ಟು ಬಿಡುವುದಾಗಿ ಹೇಳಿದ್ದಾರೆ ಎಂದು ಪತ್ನಿಗೆ ತಿಳಿಸಿದ್ದಾನೆ.

ಗಾಬರಿಗೊಂಡ ಮಗುವಿನ ತಾಯಿ ಹತ್ತಿರದ ಚಿನ್ನದ ಅಂಗಡಿಗೆ ಹೋಗಿ ಒಡವೆಗಳನ್ನು ಅಡವಿಟ್ಟು ಐದು ಲಕ್ಷ ರೂ. ಹೊಂದಿಸಿದ್ದಾರೆ. ಮನೆಗೆ ಬಂದ ರವಿ ಕುಮಾರ್‌ ಆ ಹಣ ಪಡೆದುಕೊಂಡು ಹೋಗಲು ಮುಂದಾದಾಗ ತಾನೂ ಬರುತ್ತೇನೆಂದು ಪತ್ನಿ ತಮಿಳ್‌ ಇಳಕಿಯ ಹೇಳಿದ್ದಾರೆ. ಆಗ ಆರೋಪಿಯು ಒಬ್ಬನೇ ಬರಬೇಕು ಎಂದು ಅಪಹರಣಕಾರರು ತಾಕೀತು ಮಾಡಿದ್ದು, ನೀನು ಬರಬೇಡ ಎಂದಿದ್ದಾನೆ.

ಹಣ ತೆಗೆದುಕೊಂಡು ಹೋದ ಆರೋಪಿ ಪತ್ನಿಗೆ ಕರೆ ಮಾಡಿ ಯಾವುದೇ ಸಂಶಯ ಬರದ ರೀತಿಯಲ್ಲಿ ಮಾತನಾಡಿ, ಅಪಹರಣಕಾರರು ಸ್ಥಳದಿಂದ ಸ್ಥಳಕ್ಕೆ ಅಲೆದಾಡಿಸುತ್ತಿದ್ದಾರೆ ಎಂದು ಹೇಳಿದ್ದಾನೆ. ಮತ್ತಷ್ಟು ಭಯಗೊಂಡ ಇಳಕಿಯ ಅವರು ಅಯನವರಂ ಪೊಲೀಸರಿಗೆ ದೂರು ನೀಡುತ್ತಾರೆ. ಇದು ಆರೋಪಿಗೆ ಗೊತ್ತಿರುವುದಿಲ್ಲ.

ಕೊನೆಗೆ ಆರೋಪಿ ರವಿ ಮಗುವಿನ ಜತೆ ಮನೆಗೆ ಬಂದು, ಅಪಹರಣಕಾರರಿಗೆ ಐದು ಲಕ್ಷ ರೂ. ನೀಡಿ ಮಗುವನ್ನು ಬಿಡಿಸಿಕೊಂಡು ಬಂದಿರುವುದಾಗಿ ಹೇಳುತ್ತಾನೆ. ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಅಸಂಬದ್ಧ ಉತ್ತರ ನೀಡುತ್ತಾನೆ. ವೇಣು ಎಂಬ ಸ್ನೇಹಿತನ ಬಳಿ ಅಪಹರಣಕಾರರಿಗೆ ತಲುಪಿಸಲು ಹಣ ನೀಡಿದ್ದಾಗಿ ರವಿ ಕುಮಾರ್‌ ಹೇಳುತ್ತಾನೆ. ತನಗೆ ಸ್ವಲ್ಪ ಕೆಲಸವಿದ್ದು, ಮಗುವನ್ನು ನೋಡಿಕೊಳ್ಳುವಂತೆ ಆರೋಪಿ ವೇಣುವಿಗೆ ಹೇಳಿ ಅಲ್ಲಿ ಬಿಟ್ಟಿದ್ದ. ವೇಣುವಿಗೆ ಅಪಹರಣದ ನಾಟಕದ ಬಗ್ಗೆ ಏನೂ ಗೊತ್ತಿರಲಿಲ್ಲ. ಆನಂದ್‌ ಎಂಬಾತನಿಂದ ಪಡೆದಿದ್ದ ಹಣ ವಾಪಸ್‌ ಮಾಡುವುದಕ್ಕಾಗಿ ಆಟೋಪಿ ಈ ನಾಟಕ ಆಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.