ರಾಷ್ಟ್ರೀಯ

ನೋಟು ಅಮಾನ್ಯ ತಪ್ಪುಎಂಬುದನ್ನು ಒಪ್ಪಿಕೊಳ್ಳಿ; ಮಾಜಿ PM ಸಿಂಗ್ ಸಲಹೆ

Pinterest LinkedIn Tumblr


ನವದೆಹಲಿ: ನೋಟುಗಳ ಅಮಾನ್ಯದ ಪರಿಣಾಮಬಹುಹಂತದ್ದು. ಕಳೆದ ವರ್ಷ ಪ್ರಧಾನಿ ಮೋದಿ ಕೈಗೊಂಡಿರುವ ನಿರ್ಧಾರ ತಪ್ಪು. ಅದನ್ನು ಅವರು ಇನ್ನಾದರೂ ಒಪ್ಪಿಕೊಳ್ಳಬೇಕು’ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ಸಮಾಜದ ಅತ್ಯಂತ ಕೆಳಸ್ತರದ ಜನರಿಗೆ ಅದರ ಪ್ರಭಾವ ಪ್ರಬಲವಾಗಿಯೇ ತಟ್ಟಿದೆ. ಅರ್ಥವ್ಯವಸ್ಥೆಯನ್ನು ಮತ್ತೆ ನಿರ್ಮಿಸುವಲ್ಲಿ ಅವರು ಎಲ್ಲರ ಬೆಂಬಲ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ನೋಟುಗಳ ಅಮಾನ್ಯ ಮಾಡಿ ಬುಧವಾರಕ್ಕೆ ಸರಿಯಾಗಿ ವರ್ಷ ಪೂರ್ಣವಾಗಲಿದೆ. ಅದೇ ದಿನ ಬಿಜೆಪಿಯಿಂದ “ಕಪ್ಪುಹಣ ವಿರೋಧಿ ದಿನ’ ಮತ್ತು ಪ್ರತಿಪಕ್ಷಗಳ ವತಿಯಿಂದ “ಕರಾಳ ದಿನ’ಕ್ಕೆ ತೀರ್ಮಾನಿಸಿರುವಂತೆಯೇ ಮಾಜಿ ಪ್ರಧಾನಿ ಮನ  ಮೋಹನ್‌ ಸಿಂಗ್‌ “ಬ್ಲೂಮ್‌ಬರ್ಗ್‌ ಕ್ವಿಂಟ್‌’ ಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನೋಟುಗಳ ಅಮಾನ್ಯಕ್ಕೆ ಸಂಬಂಧಿಸಿ ರಾಜಕೀಯ ಆರೋಪ-ಪ್ರತ್ಯಾರೋಪದ ಸಮಯ ಮುಕ್ತಾಯವಾಗಿದೆ.

ಪ್ರಧಾನಿ ಮೋದಿ ತಮ್ಮ ನಿರ್ಧಾರದಿಂದ ಉಂಟಾದ ತಪ್ಪಿನ ಬಗ್ಗೆ ಒಪ್ಪಿಕೊಳ್ಳಬೇಕು. ಸದ್ಯ ರಾಜಕೀಯ ವಿಚಾರ ಬದಿಗಿಟ್ಟು ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನತ್ತ ಗಮನ ಹರಿಸಬೇಕು’ ಎಂದಿದ್ದಾರೆ. ಕಳೆದ ವರ್ಷ ಕೈಗೊಂಡ ನಿರ್ಧಾರದ ಬಗ್ಗೆ ವ್ಯಕ್ತಪಡಿಸಿದ್ದ ಟೀಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅಮಾನ್ಯದಿಂದ ವಿಶೇಷವಾಗಿ ತೊಂದರೆಗೆ ಒಳಗಾದವರು ಸಮಾಜದ ಅತ್ಯಂತ ಕೆಳ ವರ್ಗದ ಜನ. ಅದು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಥಿಕವಾಗಿಯೂ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎಂದು ಡಾ. ಸಿಂಗ್‌ ಹೇಳಿದರು. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕುಸಿದಿದೆ ಎನ್ನುವುದು ಅರ್ಥ ವ್ಯವಸ್ಥೆ ಮೇಲೆ ಬೀರಿದ ಪ್ರತಿಕೂಲ ಪರಿಣಾಮದ ಒಂದು ರೂಪವಷ್ಟೇ ಎಂದರು.

“ಪ್ರಧಾನಿ ಮೋದಿ ಘೋಷಣೆ ಮಾಡಿದ ನಿರ್ಧಾರದಿಂದ ತಕ್ಷಣಕ್ಕೆ ಸಂಕಟಪಟ್ಟ ಕ್ಷೇತ್ರವೆಂದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ. ನೋಟು ಅಮಾನ್ಯದಿಂದ ಈಗಾಗಲೇ ಅಸಮಾನತೆ ಹೊಂದಿರುವ ಅರ್ಥ ವ್ಯವಸ್ಥೆಯಲ್ಲಿ ಮತ್ತಷ್ಟು ತಳಮಳ ಹೆಚ್ಚಿಸುವ ಸಾಧ್ಯತೆ ಇದೆ. ತಳ ವರ್ಗಕ್ಕೆ ನಿರ್ಧಾರ ನೀಡಿದ ಹೊಡೆತ ಯಾವುದೇ ಅರ್ಥ ವ್ಯವಸ್ಥೆಯ ಸೂಚ್ಯಂಕಕ್ಕಿಂತ ಪ್ರಬಲವಾ ದದ್ದು’ ಎಂದು ಮಾಜಿ ಪ್ರಧಾನಿ ಸಿಂಗ್‌ ವಿಶ್ಲೇಷಿಸಿದ್ದಾರೆ.

ಮಮತಾ ಟೀಕೆ: ಏತನ್ಮಧ್ಯೆ, ಜಿಎಸ್‌ಟಿ ವಿರುದ್ಧ ತಮ್ಮ ವಾಗ್ಧಾಳಿಯನ್ನು ಮುಂದುವರಿಸಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಜಿಎಸ್‌ಟಿ ಎಂದರೆ ಗ್ರೇಟ್‌ ಸೆಲ್ಫಿಷ್‌ ಟ್ಯಾಕ್ಸ್‌ ಎಂದು ಟೀಕಿಸಿದರು.

ಹೆಚ್ಚು ನಗದು ಅರ್ಥವ್ಯವಸ್ಥೆಗೆ ಅಪಾಯ
ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಗದು ವ್ಯವಸ್ಥೆ ಇದ್ದರೆ ಅಪಾಯ. ನೋಟು ಅಮಾನ್ಯದ ಬಳಿಕ ದೇಶದ ಅರ್ಥ ವ್ಯವಸ್ಥೆ ಡಿಜಿಟಲ್‌ ಪಾವತಿ ವ್ಯವಸ್ಥೆಯತ್ತ ಹೊರಳಿಕೊಳ್ಳುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ನಗದು ವ್ಯವಹಾರಕ್ಕಿಂತ ಡಿಜಿಟಲ್‌ ಗೇ ಹೆಚ್ಚಿನ ಜನಪ್ರಿಯತೆ ಬರುತ್ತಿರುವುದು ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗುತ್ತಿರುವ ಭಾರಿ ಬದಲಾವಣೆ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಇಂಥ ವ್ಯವಸ್ಥೆ ಏಕಾಏಕಿ ಸಾಧ್ಯವಿಲ್ಲ. ಡಿಜಿಟಲ್‌ ವ್ಯವಸ್ಥೆಯಿಂದ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಠೇವಣಿ ಜಮೆಯಾಗುತ್ತದೆ. ಇದರಿಂದಾಗಿ ಅವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು ಜೇಟ್ಲಿ.

ಅಮಾನ್ಯದಿಂದ ಅನುಕೂಲವೆಂದ ಬ್ಯಾಂಕ್‌ಗಳು
ಅಮಾನ್ಯ ನಿರ್ಧಾರದಿಂದ ಅನು ಕೂಲವೇ ಆಗಿದೆ ಎಂದು ಬ್ಯಾಂಕ್‌ಗಳು ಹೇಳಿಕೊಂಡಿವೆ. ಅತ್ಯಂತ ಶೀಘ್ರವಾಗಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿ ಸುವತ್ತ ನಿರ್ಧಾರ ಸಹಕಾರಿಯಾಗಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹವಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿಕೊಂಡಿದ್ದಾರೆ. ಮ್ಯೂಚುವಲ್‌ ಫ‌ಂಡ್‌ಗಳು ಮತ್ತು ವಿಮಾ ಕ್ಷೇತ್ರದಲ್ಲಿ ಯೂ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಹರಿದು ಬಂದಿದೆ ಎಂದು ಐಸಿಐಸಿಐ ಬ್ಯಾಂಕ್‌ ಸಿಇಒ ಚಂದಾ ಕೊಚರ್‌ ತಿಳಿಸಿದ್ದಾರೆ.

20 ಸಾವಿರ ರಿಟರ್ನ್ಸ್ಗಳ ಬಗ್ಗೆ ಸಮಗ್ರ ತನಿಖೆ
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಆದಾಯ ತೆರಿಗೆ ಇಲಾಖೆ 20,572 ರಿಟರ್ನ್ಸ್ ಸಲ್ಲಿಕೆಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಮುಂದಾಗಿದೆ. ಅವುಗಳಲ್ಲಿ ನೋಟುಗಳ ಅಮಾನ್ಯ ಮೊದಲು ಮತ್ತು ನಂತರ ಅಕ್ರಮ ನಡೆದ ಬಗ್ಗೆ ಸಂಶಯ ಎದ್ದಿರುವುದರಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಕೃತ ಮಾಹಿತಿ ಪ್ರಕಾರ 17.73 ಲಕ್ಷ ಶಂಕಿತ ಪ್ರಕರಣಗಳಲ್ಲಿ 3.68 ಲಕ್ಷ ಕೋಟಿ ರೂ.ಗಳನ್ನು 23.22 ಲಕ್ಷ ಬ್ಯಾಂಕ್‌ ಖಾತೆಗಳ ಮೂಲಕ ನಡೆಸಲಾಗಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ. 16.92 ಲಕ್ಷ ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿ 11.8 ಲಕ್ಷ
ಮಂದಿಯಿಂದ ಆನ್‌ಲೈನ್‌ ಮೂಲಕ ಉತ್ತರ ಸಿಕ್ಕಿದೆ.

-ಉದಯವಾಣಿ

Comments are closed.