ರಾಷ್ಟ್ರೀಯ

ಕಾಶ್ಮೀರಿಗಳಿಗೆ ಆಜಾದಿ ಎಂದರೆ ಸ್ವಾಯತ್ತೆ ಎಂದರ್ಥ: ಚಿದಂಬರಂ

Pinterest LinkedIn Tumblr


ಹೊಸದಿಲ್ಲಿ : ”ಜಮ್ಮು ಕಾಶ್ಮೀರದ ಹೆಚ್ಚಿನ ಜನರಿಗೆ ಆಜಾದಿ ಪದದ ಅರ್ಥ ಸ್ವಾಯತ್ತೆ. ಈ ಹಿಂದೆ ನಾನು ಜಮ್ಮು ಕಾಶ್ಮೀರದಲ್ಲಿ ಜನರೊಂದಿಗೆ ಮಾತುಕತೆ ನಡೆಸಿದ್ದಾಗ ತಮಗೆ ಆಜಾದಿ ಬೇಕು ಎಂದು ಕೇಳುವ ಜಮ್ಮು ಕಾಶ್ಮೀರದ ಹೆಚ್ಚಿನವರು ಸ್ವಾಯತ್ತೆಯನ್ನು ಬಯಸುತ್ತಾರೆ ಎಂದು ಗೊತ್ತಾಯಿತು” ಎಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

”ಜಮ್ಮು ಕಾಶ್ಮೀರದ ಜನರು ಬಯಸುವ ಸ್ವಾಯತ್ತೆಯನ್ನು ಸರಕಾರ ಪರಿಗಣಿಸುವುದೇ ಒಳಿತು. ಹಾಗೆ ಅವರಿಗೆ ಸ್ವಾಯತ್ತೆಯನ್ನು ಕೊಟ್ಟಾಗ ಜಮ್ಮು ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯುತ್ತದೆ. ಮತ್ತು ಸ್ವಾಯತ್ತೆಯನ್ನು ಕೊಡುವ ಮೂಲಕ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ಹೆಚ್ಚು ಅಧಿಕಾರದ ಭರವಸೆಯನ್ನು ಈಡೇರಿಸಿದಂತಾಗುತ್ತದೆ” ಎಂದು ಚಿದಂಬರಂ ಹೇಳಿದರು.

ಕೇಂದ್ರ ಸರಕಾರ ಈಚೆಗಷ್ಟೇ ಜಮು ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯವರ್ತಿಯನ್ನಾಗಿ ಗುಪ್ತಚರ ದಳದ ಮಾಜಿ ನಿರ್ದೇಶಕ ದಿನೇಶ್ವರ ಶರ್ಮಾ ಅವರನ್ನು ನೇಮಕ ಮಾಡಿತ್ತು. ಆ ಸಂದರ್ಭದಲ್ಲಿ ಚಿದಂಬರಂ ಟ್ವೀಟ್‌ ಮಾಡಿ, “ಜಮ್ಮು ಕಾಶ್ಮೀರದಲ್ಲಿ ರಟ್ಟೆ ಬಲದ ನೀತಿ ವಿಫ‌ಲವಾಗಿದೆ ಎಂಬುದನ್ನು ಸರಕಾರ ಅಂತಿಮವಾಗಿ ಒಪ್ಪಿಕೊಂಡಂತಾಗಿದೆ’ ಎಂದು ಟಾಂಗ್‌ ನೀಡಿದ್ದರು.

ಐತಿಹಾಸಿಕ ತಾಜ್‌ ಮಹಲ್‌ ಸ್ಮಾರಕ ಕುರಿತಾಗಿ ಬಿಜೆಪಿ ನಾಯಕರು, ಸಚಿವರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಚಿದಂಬರಂ, “ಅವರಿಗೆ ಭಾರತದ ಇತಿಹಾಸವಾಗಲೀ, ಭಾರತದ ಸಂಕೀರ್ಣ ಸಂಸ್ಕೃತಿಯ ಬಗೆಗಾಗಲೀ ಏನೂ ಗೊತ್ತಿಲ್ಲ’ ಎಂದು ಹೇಳಿದರು.

-ಉದಯವಾಣಿ

Comments are closed.