ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಗುಣಗಳನ್ನು ಹೊಂದಿದ್ದು, ಸರ್ವಾಧಿಕಾರಿಯಲ್ಲದ ನಾಯಕರನ್ನು ಬೆಂಬಲಿಸುವಂತೆ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಶನಿವಾರ ದೇಶದ ಜನತೆಗೆ ಒತ್ತಾಯಿಸಿದ್ದಾರೆ.
ಇಂದು ಬೆಂಗಳೂರು ಸಾಹಿತ್ಯ ಉತ್ಸವ 2017ರಲ್ಲಿ ‘ಉಗ್ರ ರಾಷ್ಟ್ರೀಯವಾದ ವರ್ಸಸ್ ದೇಶಭಕ್ತಿ’ ವಿಷಯದ ಕುರಿತು ಮಾತನಾಡಿದರು ರಾಮಚಂದ್ರ ಗುಹಾ ಅವರು, ಎಡ ಮತ್ತು ಬಲ ಪಂಥೀಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾರತದಲ್ಲಿ ಈಗ ದಂಡ, ಝಂಡಾ ಮತ್ತು ಬುಲೆಟ್ಗಳೇ ದೇಶಭಕ್ತಿಯ ಸಂಕೇತವಾಗಿ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಧರ್ಮ, ಭಾಷೆ ಮತ್ತು ಸಂಸ್ಕೃತಿಯ ಆಧಾರದಲ್ಲಿ ದೇಶದಲ್ಲಿ ಯಾರೂ ಶ್ರೇಷ್ಠರಲ್ಲ. ಭಕ್ತಿ ರಾಜಕೀಯಗೊಂಡಾಗ ಅಲ್ಲಿ ಸರ್ವಾಧಿಕಾರ ಬೆಳೆಯುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ನರೇಂದ್ರ ಮೋದಿ ಅವರ ವಿಷಯದಲ್ಲಿ ಮಾತ್ರವಲ್ಲ ಇಂದಿರಾ ಗಾಂಧಿ ಅವರ ವಿಷಯದಲ್ಲೂ ನಡೆದಿದ್ದು ಇದೇ. ಯಾವುದೇ ನಾಯಕರೂ ಪರಿಪೂರ್ಣರಲ್ಲ ಎಂದು ಇತಿಹಾಸಕಾರ ಹೇಳಿದ್ದಾರೆ.
ಕಾಂಗ್ರೆಸ್ನ ಭ್ರಷ್ಟಾಚಾರ ಮತ್ತು ಎಡಪಂಥೀಯರ ಸೈದ್ಧಾಂತಿಕ ಸೋಲು ಹಿಂದುತ್ವ ಹಾಗೂ ಉಗ್ರ ರಾಷ್ಟ್ರೀಯವಾದ ಬೆಳೆಯಲು ಕಾರಣ. ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗುತ್ತಾ ಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದ್ದು ದೊಡ್ಡ ದುರಂತ ಎಂದರು.
19ನೇ ಶತಮಾನದ ಯುರೋಪಿಯನ್ ರಾಷ್ಟ್ರೀಯತೆಯ ಮಾದರಿಯಲ್ಲಿ ಭಾರತದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬೆಳೆದಿದೆ. ಆದರೆ, ಬಹುತ್ವದ ಭಾರತಕ್ಕೆ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯ ಆಧಾರದ ರಾಷ್ಟ್ರೀಯತೆ ಒಗ್ಗುವಂಥದ್ದಲ್ಲ. ಗಾಂಧೀಜಿ ಹೇಳಿದ ಸ್ವರಾಜ್ಯ ತತ್ವದ ಆಧಾರದ ರಾಷ್ಟ್ರೀಯತೆ ಭಾರತಕ್ಕೆ ಬೇಕಿತ್ತು. ಅಹಿಂಸೆ, ಕೋಮುಸೌಹಾರ್ದ, ಅಸ್ಪೃಶ್ಯತೆ ನಿವಾರಣೆ ಮತ್ತು ಆರ್ಥಿಕ ಸ್ವಾವಲಂಬನೆಯ ತತ್ವಗಳ ಆಧಾರದ ಮೇಲೆ ಇಲ್ಲಿ ರಾಷ್ಟ್ರೀಯತೆ ರೂಪುಗೊಳ್ಳಬೇಕಿತ್ತು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹುಟ್ಟಿದ ದ್ವೇಷದ ಮಾದರಿಯಲ್ಲೇ ಭಾರತದಲ್ಲಿ ಉಗ್ರರಾಷ್ಟ್ರೀಯವಾದ ಬೆಳೆಯುತ್ತಿದೆ. ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ದಾಭೋಲ್ಕರ್, ಪಾನ್ಸಾರೆ ಅವರು ಇಂತಹ ದ್ವೇಷಕ್ಕೆ ಬಲಿಯಾದವರು. ಉತ್ತರ ಪ್ರದೇಶದಲ್ಲಿ ಬದುಕಬೇಕೆನ್ನುವವರು ಯೋಗಿಯನ್ನೇ ನಾಯಕ ಎಂದು ಒಪ್ಪಬೇಕು. ರಾಮಮಂದಿರ ನಿರ್ಮಾಣವನ್ನೇ ಬೆಂಬಲಿಸಬೇಕು. ದೇಶದಲ್ಲಿ ಬಹುತ್ವವನ್ನು ಒಪ್ಪದ ವಾತಾವರಣ ಬೆಳೆಯುತ್ತಿರುವ ರೀತಿ ಇದು ಎಂದರು.
ಇನ್ನು ಬೆಂಗಳೂರು ಸಾಹಿತ್ಯ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗುಹಾ ಅವರು, ದೇಶದ ವಿವಿಧ ಕಡೆಗಳಲ್ಲಿ ನಡೆಯುವ ಬಹುತೇಕ ಸಾಹಿತ್ಯ ಉತ್ಸವಗಳಿಗೆ ಕಾರ್ಪೊರೇಟ್ ದೇಣಿಗೆ ಸಿಗುತ್ತದೆ. ಆದರೆ, ಬೆಂಗಳೂರಿನ ಸಾಹಿತ್ಯ ಉತ್ಸವ ಇಲ್ಲಿನ ಸಾಹಿತ್ಯಾಸಕ್ತರ ಬಲದಿಂದಲೇ ನಡೆಯುವ ಉತ್ಸವ ಎಂದಿದ್ದಾರೆ.