ನವದೆಹಲಿ: ಕೇಂದ್ರ ಸರ್ಕಾರದ ಉದ್ದೇಶಿತ ಕಾರ್ಯಕ್ರಮ ಸ್ವಚ್ಛ ಭಾರತ ಅಭಿಯಾನದಲ್ಲಿ ಮಾಧ್ಯಮ ಮತ್ತು ಪತ್ರಕರ್ತರ ಪಾತ್ರ ಪ್ರಶಂಸಾರ್ಹ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿರುವ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ “ದಿವಾಲಿ ಮಿಲನ್” (ದೀಪಾವಳಿ ಮಿಲನ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಚನಾತ್ಮಕ ಪಾತ್ರ ವಹಿಸಿ ಎಂದು ಪತ್ರಕರ್ತರಿಗೆ ಸಲಹೆ ನೀಡಿದ್ದಾರೆ. ಅಂತೆಯೇ ಪತ್ರಕರ್ತರೊಂದಿಗೆ ಹೆಚ್ಚು ಮಾತನಾಡುವುದರಿಂದ ಔದ್ಯೋಗಿಕ ಅಪಾಯ ಎಂದು ಹೇಳಿರುವ ಮೋದಿ, ಇತ್ತೀಚೆಗೆ ಹಲವು ಪತ್ರಕರ್ತ ಮಿತ್ರರು ನೀವು ಪತ್ರಕರ್ತರೊಂದಿಗೆ ಹೆಚ್ಚು ಬೆರೆಯುತ್ತಿಲ್ಲ ಎಂದು ದೂರುತ್ತಿದ್ದರು. ಹಿಂದೆ ಸಾಕಷ್ಟು ಬಾರಿ ಪತ್ರಕರ್ತರೊಂದಿಗೆ ಮಾತನಾಡಿದ್ದೇನೆ. ಅದರೆ ಇದೀಗ ನಿರ್ಣಾಯಕ ವೇದಿಕೆ ಸೃಷ್ಟಿಯಾಗಿ ಮತ್ತೆ ನಾನು ನಿಮ್ಮ ಮುಂದೆ ಬಂದಿದ್ದೇನೆ. ಮೊದಲ ಬಾರಿಗೆ ಪೇಪರ್, ಪೆನ್ನು, ಕ್ಯಾಮೆರಾಗಳಿಲ್ಲದೇ ನಿಮ್ಮೊಂದಿಗೆ ಮಾತನಾಡುರುವುದು ಖುಷಿ ನೀಡಿದೆ ಎಂದು ಹೇಳಿದರು.
ಅಂತೆಯೇ ಕೇಂದ್ರ ಸರ್ಕಾರದ ಬಹು ಉದ್ದೇಶಿತ ಸ್ವಚ್ಛ ಭಾರತ ಅಭಿಯಾನದಲ್ಲಿ ಮಾಧ್ಯಮಗಳ ಪಾತ್ರ ಪ್ರಶಂಸಾರ್ಹ ಎಂದ ಪ್ರಧಾನಿ ಮೋದಿ, ಕಾರ್ಯಕ್ರಮ ಸಂಬಂಧ ಜನರ ಮೇಲೆ ಮಾಧ್ಯಮಗಳ ಅಪಾರ ಪ್ರಭಾವ ಬೀರಿದೆ. ಪ್ರಮುಖವಾಗಿ ಇತ್ತೀಚೆಗೆ ಸರ್ಕಾರದ ಕುರಿತು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆಯಾದರೂ, ಸ್ವಚ್ಛ ಭಾರತ ಅಭಿಯಾನದ ಕುರಿತು ಮಾಧ್ಯಮಗಳ ಕಾರ್ಯ ಪ್ರಶಂಸನೀಯವಾದುದು. ಪ್ರತೀಯೊಂದು ಮಾಧ್ಯಮ ಸಂಸ್ಥೆ ಅಥವಾ ಪತ್ರಕರ್ತ ತುಂಬು ಹೃದಯದಿಂದ ಸರ್ಕಾರದ ಯೋಜನೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಅಂತೆಯೇ ರಾಜಕೀಯ ಪಕ್ಷಗಳ ಕುರಿತು ಮಾತನಾಡಿದ ಮೋದಿ, ರಾಜಕೀಯ ಪಕ್ಷಗಳಲ್ಲಿ ಪಾರದರ್ಶಕತೆ ಮುಖ್ಯ. ಜನರಿಗೆ ನೀವು ಎಷ್ಟು ಹತ್ತಿರವಾಗುತ್ತಿರೀ.. ಎಷ್ಟು ಪಾರದರ್ಶಕವಾಗಿರುತ್ತೀರಿ ಎಂಬುದರ ಮೇಲೆ ಜನರ ಪ್ರೀತಿ, ನಂಬಿಕೆಯ ಗಳಿಕೆ ಆಧಾರಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದಿವಾಲಿ ಮಿಲನ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಪಕ್ಷದ ಮುಖಂಡರಾದ ಸಂಬಿತ್ ಪಾತ್ರಾ, ಜಿವಿಎಲ್ ನರಸಿಂಹರಾವ್ ಅವರು ಪಾಲ್ಗೊಂಡಿದ್ದರು.