ಗುವಾಹಟಿ: ಕೇಂದ್ರ ಸಚಿವ ರಾಜನ್ ಗೊಹನ್ ಅವರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆಸಿರುವ ಘಟನೆ ಗುವಾಹಟಿಯ ನಗಾವಂಟ್ ಟೌನ್ ನಲ್ಲಿ ಗುರುವಾರ ನಡೆದಿದೆ.
ಗುವಾಹಟಿಯ ನಗಾಂವ್ ಟೌನ್ ನಲ್ಲಿರುವ ರಾಜನ್ ಗೊಹನ್ ಅವರ ಅವರ ಮನೆ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ತಡರಾತ್ರಿ ಇದ್ದಕ್ಕಿದ್ದಂತೆ ರೈಲ್ವೆ ಖಾತೆ ರಾಜ್ಯ ಸಚಿವ ರಾಜನ್ ಗೊಹನ್ ಅವರ ನಿವಾಸದ ಮೇಲೆ ಗ್ರೆನೇಡ್ ಎಸೆದು ಪರಾರಿಯಾದರು ಎಂದು ಪ್ರತ್ಯಕ್ಷಗಳು ಹೇಳಿದ್ದಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅದೃಷ್ಟವಶಾತ್ ಗ್ರೆನೇಡ್ ಸ್ಫೋಟಗೊಂಡಿಲ್ಲ. ಹೀಗಾಗಿ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಭದ್ರತಾ ಸಿಬ್ಬಂದಿಗಳು ಗ್ರೆನೇಡ್ ನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಘಟನೆ ವೇಳೆ ಗೊಹನ್ ಅವರಾಗಲೀ, ಕುಟುಂಬಸ್ಥರಾಗಲಿ ಯಾರೊಬ್ಬರು ಇರಲಿಲ್ಲ. ಭದ್ರತಾ ಸಿಬ್ಬಂದಿಗಳಷ್ಟೇ ನಿವಾಸದ ಬಳಿ ಇದ್ದರೆಂದು ತಿಳಿದುಬಂದಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.