ನವದೆಹಲಿ(ಡಿ. 25): ಡಿಜಿಟಲ್ ಭಾರತ ಯೋಜನೆಯನ್ನು ಸಾಕಾರಗೊಳಿಸುವತ್ತ ಕೇಂದ್ರ ಸರಕಾರ ಇಂದು ಮತ್ತೊಂದು ಮುಖ್ಯ ಹೆಜ್ಜೆಯನ್ನಿರಿಸಿದೆ. ಆಧಾರ್ ಪೇಮೆಂಟ್(ಯುಪಿಐ) ಆ್ಯಪ್’ನ್ನು ಇಂದು ಅನಾವರಣಗೊಳಿಸಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಈ ಮಹತ್ವದ ಯೋಜನೆಯ ಘೋಷಣೆ ಮಾಡಿದರು.
ಇನ್ಮುಂದೆ, ಸ್ಮಾರ್ಟ್’ಫೋನ್ ಇಲ್ಲದಿದ್ದರೂ ಆಧಾರ್ ನಂಬರ್ ಮೂಲಕ ಹಣದ ವಹಿವಾಟು ನಡೆಸಬಹುದಾಗಿದೆ. ಕೇಂದ್ರ ಸರಕಾರದ ಈ ಹೊಸ ಯೋಜನೆಯು ಹಳ್ಳಿಯಲ್ಲಿರುವ ಬಡವರೂ ಸುಲಭವಾಗಿ ಬಳಸುವಂತಹದ್ದಾಗಿದೆ. ಕೈಬೆರಳಚ್ಚು(ಫಿಂಗರ್ ಪ್ರಿಂಟ್) ಮೂಲಕ ಜನಸಾಮಾನ್ಯರು ವಹಿವಾಟು ನಡೆಸಬಹುದಾಗಿದೆ.
ಇದರ ಕಾರ್ಯನಿರ್ವಹಣೆ ಹೇಗೆ?
1) ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬೇಕು:
ಜನಸಾಮಾನ್ಯರು ಅಥವಾ ಗ್ರಾಹಕರು ಮೊದಲು ಮಾಡಬೇಕಾದ ಕೆಲಸವೆಂದರೆ ತಮ್ಮ ಆಧಾರ್ ಕಾರ್ಡ್ ನಂಬರನ್ನು ತಮ್ಮೆಲ್ಲಾ ಬ್ಯಾಂಕ್ ಅಕೌಂಟ್’ಗಳಿಗೆ ಲಿಂಕ್ ಮಾಡಬೇಕು. ಅಂದರೆ, ತಮ್ಮ ಅಕೌಂಟ್’ಗಳಿರುವ ಬ್ಯಾಂಕ್’ಗಳಲ್ಲಿ ಹೋಗಿ ತಮ್ಮ ಆಧಾರ್ ಕಾರ್ಡ್’ನ ನಂಬರನ್ನು ರಿಜಿಸ್ಟರ್ ಮಾಡಬೇಕು.
2) ವ್ಯಾಪಾರಿಗಳು ಆಧಾರ್ ಆ್ಯಪ್ ಇನ್’ಸ್ಟಾಲ್ ಮಾಡಬೇಕು:
ವ್ಯಾಪಾರಿಗಳ ಬಳಿ ಸ್ಮಾರ್ಟ್’ಫೋನ್ ಹಾಗೂ ಬಯೋಮೆಟ್ರಿಕ್ ಸ್ಕ್ಯಾನರ್ ಇರಬೇಕಾಗುತ್ತದೆ. ಆ ಫೋನ್’ಗೆ ಯುಪಿಐ- ಅಥವಾ ಆಧಾರ್ ಪೇಮೆಂಟ್ ಆ್ಯಪ್’ನ್ನು ಇನ್ಸ್’ಟಾಲ್ ಮಾಡಿಕೊಳ್ಳಬೇಕು. ಹಾಗೂ ಆ ಸ್ಮಾರ್ಟ್’ಫೋನ್’ಗೆ ಬಯೋಮೆಟ್ರಿಕ್ ಸ್ಕ್ಯಾನರ್ ಅನ್ನು ಕನೆಕ್ಟ್ ಮಾಡಬೇಕು. ಗ್ರಾಹಕರು ನೀಡುವ ಆಧಾರ್ ನಂಬರನ್ನು ಇಲ್ಲಿ ಎಂಟರ್ ಮಾಡಿದರೆ, ಆ ಗ್ರಾಹಕರ ಬ್ಯಾಂಕ್ ಅಕೌಂಟ್ ವಿವರ ಪ್ರತ್ಯಕ್ಷವಾಗುತ್ತದೆ. ಆನಂತರ ಗ್ರಾಹಕನ ಬೆರಳಚ್ಚನ್ನು ಪಡೆಯಲಾಗುತ್ತದೆ. ಅದು ಆಧಾರ್ ಕಾರ್ಡ್’ನಲ್ಲಿರುವ ಫಿಂಗರ್ ಪ್ರಿಂಟ್’ಗೆ ಮ್ಯಾಚ್ ಆದರೆ ಮಾತ್ರ ಮುಂದುವರಿಯಲು ಸಾಧ್ಯ. ಒಬ್ಬ ಗ್ರಾಹಕನ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅದರ ಪಟ್ಟಿ ಎದುರಾಗುತ್ತದೆ. ಅದರಲ್ಲಿ ಯಾವ ಬ್ಯಾಂಕ್’ನ ಖಾತೆಯನ್ನು ಬಳಸಿಕೊಳ್ಳಬೇಕೆಂಬ ಅಯ್ಕೆ ಗ್ರಾಹಕರಿಗೆ ಇರುತ್ತದೆ.
ಏನೇನು ಲಾಭ?
ಗ್ರಾಹಕರು ಈ ಆ್ಯಪ್’ನ್ನು ಇನ್ಸ್’ಟಾಲ್ ಮಾಡುವ ಅಗತ್ಯವಿರುವುದಿಲ್ಲ ಎಂಬುದು ಇಲ್ಲಿ ಮುಖ್ಯ. ವ್ಯಾಪಾರಿಗಳು ಸ್ವೈಪಿಂಗ್ ಮೆಷೀನ್’ಗೆ ಇಂತಿಷ್ಟು ಬಾಡಿಗೆ ಕೊಡುವ ಅಗತ್ಯವೂ ತಪ್ಪುತ್ತದೆ. ಮಾಸ್ಟರ್ ಕಾರ್ಡ್, ವೀಸಾ ಕಾರ್ಡ್ ಮೊದಲಾದ ಮಧ್ಯವರ್ತಿ ಸೇವಾ ಸಂಸ್ಥೆಗಳಿಗೆ ವ್ಯಾಪಾರಿಗಳು ಸರ್ವಿಸ್ ಚಾರ್ಜ್ ಕಟ್ಟುವುದು ತಪ್ಪುತ್ತದೆ.