ರಾಷ್ಟ್ರೀಯ

ಹೊಸ ವರ್ಷಕ್ಕೂ ಕಾಡಲಿರುವ ನಗದು ಅಭಾವ!

Pinterest LinkedIn Tumblr

bank-queue_0-final
ನವದೆಹಲಿ: ಬ್ಯಾಂಕ್ ಮತ್ತು ಎಟಿಎಂಗಳಿಂದ ವಿತ್‍ಡ್ರಾ ಮಾಡಲಿರುವ ಹಣದ ಮಿತಿ ಡಿಸೆಂಬರ್ 30ರ ನಂತರವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದೇಶದ ಜನರಿಗೆ ಸಾಕಾಗುವಷ್ಟು ನೋಟುಗಳನ್ನು ಮುದ್ರಣ ಮಾಡಲು ಮುದ್ರಣಾಲಯದಲ್ಲಿ ಸಾಧ್ಯವಾಗುತ್ತಿಲ್ಲ. ಹೊಸ ನೋಟುಗಳನ್ನು ಚಲಾವಣೆಗೆ ತಂದಿದ್ದರೂ ಸಾಕಷ್ಟು ನೋಟುಗಳನ್ನು ಮುದ್ರಣ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಕಷ್ಟವಾಗುತ್ತಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ನೋಟು ಕ್ಷಾಮ ಅನುಭವಕ್ಕೆ ಬರಲಿದೆ.

ನೋಟು ರದ್ದತಿ ನಿರ್ಧಾರದಿಂದಾಗಿರುವ ಪರಿಣಾಮ, ಸಮಸ್ಯೆಗಳನ್ನು ಪರಿಹರಿಸಲು 50 ದಿನಗಳ ಕಾಲಾವಕಾಶ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಆ ಕಾಲಾವಕಾಶ ಮುಗಿಯುತ್ತಾ ಬರುತ್ತಿದ್ದರೂ, ನೋಟು ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.

ಬ್ಯಾಂಕ್‌ಗಳಿಂದ ವಾರಕ್ಕೆ ₹24,000 ಹಣ ವಿತ್‍ಡ್ರಾ ಮಾಡಬಹುದು ಎಂದು ಹೇಳಿದ್ದರೂ ನಗದು ಅಭಾವದಿಂದ ಹೆಚ್ಚಿನ ಬ್ಯಾಂಕ್‍ಗಳು ಇಷ್ಟು ಮೊತ್ತವನ್ನು ಗ್ರಾಹಕರಿಗೆ ನೀಡಲಾಗದೆ ಕೈಚೆಲ್ಲಿ ಕುಳಿತಿವೆ.

ಆರ್‌ಬಿಐ ನಿಯಮದಂತೆ ನಿಗದಿ ಪಡಿಸಲಾದ ಹಣದ ಮಿತಿಯಲ್ಲಿ ಗ್ರಾಹಕರಿಗೆ ಹಣ ನೀಡಲು ಬ್ಯಾಂಕ್‍ಗಳಿಗೆ ಸಾಧ್ಯವಾಗುತ್ತಿಲ್ಲ. ನಗದು ಸಮಸ್ಯೆ ಪರಿಹಾರವಾಗುವವರೆಗೆ ಈ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಅಗತ್ಯ ಎಂದು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‍ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಮಾನ್ಯ ಜನರಿಗೆ ನಿಗದಿತ ಮಿತಿಯಷ್ಟು ಹಣ ನೀಡಲು ಬ್ಯಾಂಕ್‍ಗಳು ಒದ್ದಾಡುತ್ತಿರುವಾಗ ದೊಡ್ಡ ವ್ಯಾಪಾರ ಸಂಸ್ಥೆಗಳಿಗೆ ಬೃಹತ್ ಮೊತ್ತದ ಹಣ ಪೂರೈಕೆ ಮಾಡುವುದು ಮತ್ತಷ್ಟು ಕಷ್ಟವಾಗುತ್ತಿದೆ ಎಂದು ಮತ್ತೊಬ್ಬ ಬ್ಯಾಂಕ್ ಅಧಿಕಾರಿ ಹೇಳಿದ್ದಾರೆ.

ಬ್ಯಾಂಕ್‍ಗಳಿಗೆ ಸಾಕಷ್ಟು ನಗದು ಪೂರೈಕೆ ಮಾಡದೇ ಇದ್ದರೆ, ಗ್ರಾಹಕರು ವಿತ್‍‌ಡ್ರಾ ಮಾಡಬಹುದಾದ ಹಣದ ಮಿತಿಯನ್ನು ಸದ್ಯಕ್ಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಎಸ್‍ಬಿಐ ಅಧ್ಯಕ್ಷೆ ಆರುಂಧತಿ ಭಟ್ಟಾಚಾರ್ಯ ಅವರು ಹೇಳಿದ್ದರು.

Comments are closed.