ರಾಷ್ಟ್ರೀಯ

ಕಾಳಧನಿಕರ ವಿರುದ್ಧ ದಾಳಿ: 430 ಕೆಜಿ ಚಿನ್ನ, 15ಕೆಜಿ ಚಿನ್ನಾಭರಣ, 80 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡ ಐಟಿ ಅಧಿಕಾರಿಗಳು

Pinterest LinkedIn Tumblr

gold-biscuits

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಕಾಳಧನಿಕರ ವಿರುದ್ಧ ದಾಳಿ ಮುಂದುವರೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದು, 430 ಕೆಜಿ ಚಿನ್ನ, 15ಕೆಜಿ ಚಿನ್ನಾಭರಣ, 80 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿನ್ನಾಧರಿಸಿ ದೆಹಲಿ ಮತ್ತು ನೊಯ್ಡಾದಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ರಾಜಧಾನಿ ದೆಹಲಿ ಮತ್ತು ನೊಯ್ಡಾದ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಭಾರಿ ಪ್ರಮಾಣದ ಆಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಮಾಡಿದ್ದಾರೆ. ಸಗಟು ವ್ಯಾಪಾರ ಸಂಸ್ಥೆ ಶ್ರೀ ಲಾಲ್ ಮಹಲ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ಭಾರಿ ಮೊತ್ತದ ಚಿನ್ನಾಭರಣಗಳು ಹಾಗೂ ನಗದು ಪತ್ತೆಯಾಗಿದೆ.

ಮೂಲಗಳ ಪ್ರಕಾರ ದಾಳಿ ವೇಳೆ 430ಕೆಜಿ ತೂಕದ ಚಿನ್ನದ ಗಟ್ಟಿಗಳು, 15 ಕೆಜಿ ಚಿನ್ನಾಭರಣ ಹಾಗೂ 80 ಕೆಜಿ ತೂಕದ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಅಂತೆಯೇ 5.48 ಕೋಟಿ ಮೌಲ್ಯದ ಹಳೆಯ ನಿಷೇಧಿತ ನೋಟುಗಳು ಹಾಗೂ 12 ಲಕ್ಷ ಮೌಲ್ಯದ ಹೊಸ ನೋಟುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪ್ರಸ್ತುತ ಪತ್ತೆಯಾಗಿರುವ 430 ಕೆಜಿ ಚಿನ್ನದ ಮೌಲ್ಯವೇ ಸುಮಾರು 120 ಕೋಟಿ ಮೀರಲಿದ್ದು, ಇಷ್ಟು ಪ್ರಮಾಣದ ಚಿನ್ನ ಹಾಗೂ ಚಿನ್ನಾಭರಣಗಳು ಹೇಗೆ ಬಂದವು ಎಂಬ ಅನುಮಾನ ಅಧಿಕಾರಿಗಳನ್ನು ಕಾಡತೊಡಗಿದೆ. ಇದೇ ವೇಳೆ ತಮ್ಮ ಬಳಿ ಇದ್ದ ಅಪಾರ ಪ್ರಮಾಣದ ಕಪ್ಪುಹಣವನ್ನು ಚಿನ್ನವನ್ನಾಗಿ ಪರಿವರ್ತಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಮನೆ ಮತ್ತು ಕಚೇರಿಗಳಲ್ಲಿ ದೊರೆತ ದಾಖಲೆಗಳ ಅನ್ವಯ ಕಳೆದ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಆಪಾರ ಪ್ರಮಾಣದ ಹಣವನ್ನು ವಿವಿಧ ಖಾತೆಗಳಿಗೆ ವರ್ಗ ಮಾಡಲಾಗಿತ್ತು. ಈ ವರ್ಗಾವಣೆ ಬಗ್ಗೆಯೂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಶಂಕಿಸಿರುವಂತೆ ಸರ್ಕಾರಿ ಸ್ವಾಮ್ಯದ ಲೋಹ ಮತ್ತು ಖನಿಜ ಇಲಾಖೆಯಿಂದ ವಿಶೇಷ ಆರ್ಥಿಕ ನಿಯಮಗಳ ಅಡಿಯಲ್ಲಿ ಖರೀದಿ ಮಾಡಲಾಗಿದ್ದ ಚಿನ್ನವನ್ನು ಅಕ್ರಮವಾಗಿ ದುಬಾರಿ ಬೆಲೆ ಮಾರಾಟ ಮಾಡಲಾದ ಹಣ ಎಂದು ಶಂಕಿಸುತ್ತಿದ್ದಾರೆ.

ಇನ್ನು ಸಂಸ್ಥೆಯ ನಿರ್ದೇಶಕರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದರಾದರೂ, ಆನಾರೋಗ್ಯದ ಕಾರಣವೊಡ್ಡಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರ ವಿಚಾರಣೆ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.