ಕೊಲ್ಕತ್ತಾ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ದೈನಂದಿನ ವ್ಯವಹಾರಕ್ಕಾಗಿ ನಗದು ಹಣಕ್ಕೆ ಕಷ್ಟಪಡುತ್ತಿರುವಾಗ ಸಾಮಾನ್ಯ ಜನರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಆನ್ಲೈನ್ ವ್ಯವಹಾರಗಳಿಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಗದು ರಹಿತ ವಹಿವಾಟು ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಹೇಳುತ್ತಿದ್ದಾರೆ.
ಆದರೆ 5000 ವರ್ಷಗಳ ಹಿಂದೆಯೇ ಭಾರತದಲ್ಲಿ ನಗದು ರಹಿತ ಆರ್ಥಿಕತೆ ಇತ್ತು. ಇಲ್ಲಿ ಹಣದ ಬದಲು ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಜೇಡಿಮಣ್ಣಿನ ಬಿಲ್ಲೆಗಳನ್ನು ಬಳಸಲಾಗುತ್ತಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ.
ಈಗಿನ ಕಾಲದಂತೆ ಆಗ ಪ್ಲಾಸ್ಟಿಕ್ ಇರಲಿಲ್ಲ, ಪ್ರಾಚೀನ ಹರಪ್ಪ ನಾಗರಿಕತೆ ಕಾಲದಲ್ಲಿ ಜೇಡಿಮಣ್ಣು ಬಳಸಿ ವಿಶೇಷ ರೀತಿಯ ಬಿಲ್ಲೆಗಳನ್ನು ಬಳಸಿ ಹಣ ವಿನಿಮಯ ಮಾಡಲಾಗುತ್ತಿತ್ತು ಎಂದು ಖ್ಯಾತ ಪುರಾತತ್ವ ಸಂಶೋಧಕ, ಹರಪ್ಪ ಸಂಸ್ಕೃತಿ ಸಂಶೋಧಕ ಜೋನಾಥನ್ ಮಾರ್ಚ್ ಕೆನಾಯರ್ ಹೇಳಿದ್ದಾರೆ.
ಕೊಲ್ಕತ್ತಾದ ಇಂಡಿಯನ್ ಮ್ಯೂಸಿಯಂ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಜೋನಾಥನ್ ಈ ವಿಷಯವನ್ನು ಹೇಳಿದ್ದಾರೆ.
ಕ್ರೆಡಿಟ್ ಕಾರ್ಡ್ ನಂತೆಯೇ ಈ ಮಣ್ಣಿನ ಬಿಲ್ಲೆಗಳನ್ನು ಬಳಸಿದ್ದರು ಎಂಬುದಕ್ಕೆ ಮೆಸಪೊಟಾಮಿಯ ಇತಿಹಾಸದ ದಾಖಲೆಗಳಲ್ಲಿ ಉಲ್ಲೇಖವಿದೆ ಎಂದು ಜೋನಾಥನ್ ವಾದಿಸಿದ್ದಾರೆ.
ಗರಿಷ್ಠ ಮುಖಬೆಲೆಯ ಹಣದ ವ್ಯವಹಾರ ನಡೆಸುವಾಗ ಉಂಟಾಗುವ ಸಮಸ್ಯೆ ಪರಿಹರಿಸುವುದಕ್ಕಾಗಿ ಆ ಕಾಲದಲ್ಲಿ ಇಂಥಾ ಬಿಲ್ಲೆಗಳನ್ನು ಬಳಸಲಾಗುತ್ತಿತ್ತು.
ಇಂದು ನಾವು ಬಳಸುತ್ತಿರುವ ಡೆಬಿಟ್ -ಕ್ರೆಡಿಟ್ ಕಾರ್ಡುಗಳಲ್ಲಿ ನಮ್ಮ ಬ್ಯಾಂಕ್ ಖಾತೆಯ ವಿವರಗಳಿರುತ್ತವೆ. ಹಾಗೆಯೇ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಬಿಲ್ಲೆಗಳಲ್ಲಿ ಹಣದ ಮೌಲ್ಯವನ್ನು ನಮೂದಿಸಿ, ಮುದ್ರೆಯೊತ್ತಲಾಗುತ್ತಿತ್ತು.
ಮೆಸಪೊಟಾಮಿಯಾ ಮತ್ತು ಹರಪ್ಪ ನಾಗರಿಕತೆಗಳಲ್ಲಿ ಹಣದ ವ್ಯವಹಾರಗಳು ಹೆಚ್ಚಾಗಿ ನಡೆದು ಬರುತ್ತಿತ್ತು. ಆ ಕಾರಣದಿಂದಲೇ ಕಂಚಿನ ಅಗತ್ಯ ಜಾಸ್ತಿ ಇರುತ್ತಿತ್ತು. ಕಂಚಿನ ಪೂರೈಕೆ ಕಷ್ಟವಾದಾಗ ಅವರು ಜೇಡಿ ಮಣ್ಣು ಬಳಸಿ ಬಿಲ್ಲೆಗಳನ್ನು ತಯಾರಿಸುತ್ತಿದ್ದರು.
ಗುಜರಾತಿನ ದೇಲಾವಿರ ಎಂಬಲ್ಲಿ ವಿಶೇಷ ರೀತಿಯ ಮಣ್ಣಿನ ಬಿಲ್ಲೆಗಳನ್ನು ಚೀನಾದ ಸಂಶೋಧಕರು ಪತ್ತೆ ಹಚ್ಚಿದ್ದರು.