ರಾಷ್ಟ್ರೀಯ

ಮೋದಿ ಲಂಚದ ದಾಖಲೆ ಬಿಡುಗಡೆ ಮಾಡಿದ ರಾಹುಲ್‌

Pinterest LinkedIn Tumblr

rahul-modi
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು, ‘ಈಗೇನಂತೀರಾ ಮೋದಿ ಜೀ.. ಸಹರಾ ಡೈರಿಯಲ್ಲಿ ನಿಮ್ಮ ಹೆಸರಿದೆ… ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಗ್ರೂಪ್ ನೀಡಿದ 10 ಪಾಕೇಟ್ ನಲ್ಲಿ ಏನಿದೆ?’ ಎಂದು ಪ್ರಶ್ನಿಸಿದ್ದಾರೆ.
ಮೋದಿ ಜೀ ಅವರೇ ಸಹರಾ ಗ್ರೂಪ್ ನೀಡಿದ 10 ಪಾಕೇಟ್ ನಲ್ಲಿ ಏನಿದೆ ಎಂಬುದನ್ನು ಮೊದಲು ಬಹಿರಂಗಪಡಿಸಿ. ನಂತರ ನನ್ನ ಆರೋಪದ ಬಗ್ಗೆ ವ್ಯಂಗ್ಯವಾಡಿ ಎಂದು ರಾಹುಲ್ ಗಾಂಧಿ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ಸುಬ್ರತಾ ರಾಯ್‌ ಒಡೆತನದ ಸಹಾರಾ ಸಂಸ್ಥೆಯಿಂದ 40 ಕೋಟಿ ಮತ್ತು ಬಿರ್ಲಾ ಕಂಪನಿಯಿಂದ 12 ಕೋಟಿ ರೂ.ಸೇರಿ ಒಟ್ಟು 52 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ರಾಹುಲ್‌ ಗಾಂಧಿ ಅವರು ಅದಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್‌ ಪಕ್ಷದ ಸಮಾವೇಶದಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಆ ದಾಖಲೆಯನ್ನು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಪ್ರವಾಸದಲ್ಲಿರುವ ರಾಹುಲ್‌ 2014 ರ ಐಟಿ ದಾಳಿಯ ವೇಳೆ ಸಿಕ್ಕಿ ಬಿದ್ದಿದ್ದ ಡೈರಿ ಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡೈರಿಯಲ್ಲಿ ಮೋದಿ ಅವರಿಗೆ ನೀಡಿದ ಹಣದ ಬಗ್ಗೆ ಉಲ್ಲೇಖವಿದ್ದು , ಐಟಿ ಅಧಿಕಾರಿಗಳು ಇದನ್ನು ಬರೆದಿದ್ದಾರೆ ಎಂದು ಜನರ ಮುಂದೆ ಓದಿ ಹೇಳಿದರು. 2013 ರಲ್ಲಿ 6 ತಿಂಗಳಿನಲ್ಲಿ 9 ಬಾರಿ 40 ಕೋಟಿ ಹಣ ಮೋದಿಗೆ ಸಂದಾಯವಾಗಿದೆ ಎಂದು ದಿನಾಂಕ ಸಮೇತ ಓದಿ ಹೇಳಿದರು.
मोदीजी पहले यह तो बताइये कि 2012/13 के इन 10 packets में क्या था? pic.twitter.com/gCso0R7SZC

— Office of RG (@OfficeOfRG) December 22, 2016
ನಾನು ಮೋದಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ ಆದರೆ ಅವರು ಅದಕ್ಕೆ ಉತ್ತರಿಸುವ ಬದಲು ನನ್ನನ್ನು ವ್ಯಂಗ್ಯ ಮಾಡಿದರು. ಮೊದಲು ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಆ ಬಳಿಕ ವ್ಯಂಗ್ಯ ಮಾಡಲಿ ಎಂದರು.
ಮೋದಿ ಅವರು ನೋಟು ನಿಷೇಧ ಮಾಡಿರುವುದು ಸರ್ಜಿಕಲ್‌ ಸ್ಟ್ರೈಕ್‌ ಅಲ್ಲ ಅದು ಬಡವರು,ರೈತರು ಮತ್ತು ಶ್ರೀಸಾಮಾನ್ಯರ ಮೇಲೆ ಮಾಡಿದ ಗದಾಪ್ರಹಾರ ಎಂದರು.
ಈ ನಡುವೆ ರಾಹುಲ್‌ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, “ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಜಾ ಆಗಿರುವ ಈ ಕುರಿತ ಅರ್ಜಿಯಲ್ಲಿನ ಅಂಶಗಳನ್ನೇ ರಾಹುಲ್‌ ಗಾಂಧಿ ಪುನರುಚ್ಚರಿಸಿದ್ದಾರೆ. ಈ ಮೂಲಕ ಅಗಸ್ಟಾ ವೆಸ್ಟ್‌ಲ್ಯಾಂಡ್‌
ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿನ ಆರೋಪಗಳನ್ನು ಮರೆ ಮಾಚಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದೆ.
ರಾಹುಲ್ ಗಾಂಧಿ ಮಾತನಾಡಿರುವುದೇ ಖುಷಿಯ ಸಂಗತಿ. ರಾಹುಲ್ ಗಾಂಧಿ ಈಗ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡುವ ಮೊದಲು ವಾಸ್ತವತೆ ಅರಿಯಲಿ. ರಾಹುಲ್ ಗೆ ಹೆಚ್ಚಿನ ಜ್ಞಾನವಿಲ್ಲವೆಂದು ಮಾತಿನಿಂದಲೇ ತಿಳಿಯುತ್ತದೆ. ಹಾಗಾಗಿ ನನ್ನ ವಿರುದ್ಧ ಮಾಡಿರುವ ಆರೋಪದಿಂದ ದೇಶದಲ್ಲಿ ಎಲ್ಲಿ ಭೂಕಂಪವಾಗಿದೆ ಎಂದು ನನಗೆ ತಿಳಿಸಲಿ ಎಂದು ಪ್ರಧಾನಿ ಮೋದಿ ಇಂದು ತಿರುಗೇಟು ನೀಡಿದ್ದರು.

Comments are closed.