ರಾಷ್ಟ್ರೀಯ

ಆರ್’ಬಿಐನಿಂದ 43 ದಿನಗಳಲ್ಲಿ 60 ತಪ್ಪುಗಳು

Pinterest LinkedIn Tumblr

rbi
ನವದೆಹಲಿ(ಡಿ.22): ಹಳೆ ನೋಟು ನಿಷೇಧ ಮಾಡುವ ಮೂಲಕ, ಪ್ರಧಾನಿ ಮೋದಿ ಒಂದು ದಿಟ್ಟ ಹೆಜ್ಜೆಯಿಟ್ಟರೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಆರ್’ಬಿಐ ಒಂದು ಮಹಾಯುದ್ಧದಲ್ಲಿ ಸೋತು ಹೋಯಿತು. ಈವರೆಗೆ ದೇಶದ ಯಾರೊಬ್ಬರೂ ಆರ್’ಬಿಐನ ಕಾರ್ಯದಕ್ಷತೆಯನ್ನು ಪ್ರಶ್ನಿಸಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಜನ ಆರ್’ಬಿಐ ಕಾರ್ಯದಕ್ಷತೆಯನ್ನ ಪ್ರಶ್ನೆ ಮಾಡುತ್ತಿದ್ದಾರೆ. ಆರ್ಬಿಐನ ಈ ಒಂದು ಸೋಲು, ದೇಶದ ಜನರನ್ನೂ ಸೋಲಿಸಿದ್ದು ಸುಳ್ಳಲ್ಲ. ಒಂದೊಂದು ಹೆಜ್ಜೆಯಲ್ಲೂ ಆರ್ಬಿಐ ಇಡುತ್ತಾ ಹೋದ ಎಡವಟ್ಟಿನ ಹೆಜ್ಜೆಗಳು, ಕಾಳಧನಿಕರನ್ನು ಗೆಲ್ಲಿಸುತ್ತಾ ಹೋದವು. ಇಷ್ಟಕ್ಕೂ ಈ ನೆಟ್ವರ್ಕ್ ಹೇಗೆ ಕೆಲಸ ಮಾಡಿತು? ಇಲ್ಲಿದೆ ವಿವರ
ಆರ್’ಬಿಐನಲ್ಲಿ ಒಂದು ನೆಟ್ವರ್ಕ್ ಇರುತ್ತದೆ. ಅದರಲ್ಲೂ ನಗದು ಹಣ ರವಾನೆಗೆ, ಹಲವಾರು ಹೆಜ್ಜೆಗಳಿವೆ. ಆರ್’ಬಿಐನ ಮುದ್ರಣಾಲಯದಿಂದ ಹಿಡಿದು, ಗ್ರಾಹಕರನ್ನು ತಲುಪುವವರೆಗೆ ಅದು ಹಲವು ಹಂತಗಳನ್ನ ದಾಟಿ ಬರಬೇಕು.
ಮೊದಲು ನೋಟುಗಳು ಮೊದಲು ಬರುವುದು ಆರ್ಬಿಐ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳಿಗೆ. ಯಾವ ಯಾವ ಪ್ರಾದೇಶಿಕ ಕಚೇರಿಗಳಿಗೆ ಎಷ್ಟೆಷ್ಟು ಎನ್ನುವುದನ್ನು ಕೇಂದ್ರದ ಆರ್ಬಿಐ ನಿರ್ಧರಿಸುತ್ತದೆ. ಅಲ್ಲಿಂದ ಪ್ರಾದೇಶಿಕ ಕಚೇರಿಗಳ ಹಣ ರವಾನೆ ಕೇಂದ್ರಕ್ಕೆ ಹೋಗುತ್ತದೆ. ಪ್ರತಿ ಜಿಲ್ಲೆಗಳಲ್ಲೂ ಆರ್ಬಿಐನ ಒಂದು ಕಚೇರಿ ಕೆಲಸ ಮಾಡುತ್ತದೆ. ಆರ್ಬಿಐ ಕಚೇರಿ ಇಲ್ಲದ ಕಡೆಗಳಲ್ಲಿ ಆ ಜಿಲ್ಲೆಯ ಪ್ರಮುಖ ಬ್ಯಾಂಕ್, ಆರ್ಬಿಐನ ಕಚೇರಿಯಂತೆ ಕೆಲಸ ಮಾಡುತ್ತದೆ. ಯಾವ್ಯಾವ ಬ್ಯಾಂಕುಗಳಿಗೆ ಎಷ್ಟೆಷ್ಟು ಹಣ ಹೋಗಬೇಕು ಎನ್ನುವುದನ್ನು ಈ ಕೇಂದ್ರ ನಿರ್ಧರಿಸುತ್ತದೆ. ಅಲ್ಲಿಂದ ಈ ಹಣ ತಲುಪುವುದು ಬ್ಯಾಂಕ್ ಕೇಂದ್ರ ಕಚೇರಿಗಳಿಗೆ. ಬ್ಯಾಂಕ್ ಕೇಂದ್ರ ಕಚೇರಿಗಳು ತಮ್ಮ ತಮ್ಮ ಬ್ಯಾಂಕುಗಳ ಯಾವ್ಯಾವ ಶಾಖೆಗೆ ಎಷ್ಟು ಹಣ, ಯಾವ ಎಟಿಎಂಗೆ ಎಷ್ಟು ಹಣ ಹೋಗಬೇಕು ಎನ್ನುವುದನ್ನು ನಿರ್ಧರಿಸುತ್ತವೆ.
ಅಲ್ಲಿಂದ ಈ ಹಣ ವಿಂಗಡಣೆಯಾಗಿ, ಎಟಿಎಂ ಏಜೆನ್ಸಿಗಳಿಗೆ ಮತ್ತು ಬ್ಯಾಂಕ್ ಶಾಖೆಗಳಿಗೆ ವಿತರಣೆಯಾಗುತ್ತದೆ. ಎಟಿಎಂ ಕೇಂದ್ರಗಳಿಗೆ ಮತ್ತು ಶಾಖೆಗಳಿಗೆ ಏಜೆನ್ಸಿಗಳು ಹಣ ಪೂರೈಸುತ್ತವೆ. ಆದರೆ, ಇಲ್ಲಿಯೇ ಕಾಳಧನಿಕರ ನೆಟ್ವರ್ಕ್ ಸೃಷ್ಟಿಯಾಗಿದ್ದು. ಎಟಿಎಂ ಏಜೆನ್ಸಿಗಳನ್ನು ತಲುಪಿದ ಹಣ, ಅರ್ಧ ಎಟಿಎಂಗಳಿಗೆ ಹೋದರೆ, ಇನ್ನರ್ಧ ಕಾಳಧನಿಕರ ಕೈ ಸೇರಿತು.
ಮತ್ತೊಂದು ನೆಟ್ವರ್ಕ್ ಬ್ಯಾಂಕ್ ಶಾಖೆಗಳಿಂದ. ಅಲ್ಲಿ ನಡೆದದ್ದು ಮಹಾ ಮೋಸ. ಬ್ಯಾಂಕ್’ಗಳ ಸಿಬ್ಬಂದಿಯೇ ಶಾಮೀಲಾಗಿ ಜನರಿಗೆ ಸಿಗಬೇಕಾದ ಹಣವನ್ನು ಕಾಳಧನಿಕರಿಗೆ ತಲುಪಿಸಿಬಿಟ್ಟರು. ಗ್ರಾಹಕರಿಗೆ ಸಿಕ್ಕಿದ್ದು ಅಷ್ಟೋ ಇಷ್ಟೋ ಹಣ ಮಾತ್ರ.
ಅಲ್ಲಿಗೆ ಕಾಳಧನಿಕರ ವಿರುದ್ಧ ಮಹಾಯುದ್ಧವನ್ನೇ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಹಿನ್ನಡೆ ಅನುಭವಿಸಬೇಕಾಯಿತು. ವಿಶೇಷವೆಂದರೆ, ಇದುವರೆಗೆ ಆರ್ಬಿಐನ ಕಾರ್ಯದಕ್ಷತೆಯನ್ನು ಯಾರೊಬ್ಬರೂ ಪ್ರಶ್ನಿಸಿರಲಿಲ್ಲ. ಆದರೆ, ಕೆಲವೇ ಕೆಲವರು ನಡೆಸಿದ ಈ ಕಾಳದಂಧೆಯಿಂದಾಗಿ, ಆರ್ಬಿಐ ಈಗ ಕೆಟ್ಟ ಹೆಸರು ಹೊತ್ತುಕೊಳ್ಳುತ್ತಿದೆ. ಅದಕ್ಕೆ ತಕ್ಕಂತೆ, 44 ದಿನಗಳಲ್ಲಿ 60ಕ್ಕೂ ಹೆಚ್ಚು ನಿರ್ಧಾರ ಹೊರಡಿಸಿದೆ. ದಿನಕ್ಕೊಂದು ನೀತಿ, ದಿನಕ್ಕೊಂದು ನಿಯಮಗಳ ಮೂಲಕ ಕಾಳಧನದ ಬಗ್ಗೆ ತನಗಿದ್ದ ಅಜ್ಞಾನವನ್ನು ಹೊರಹಾಕುತ್ತಿದೆ.

Comments are closed.