ನವದೆಹಲಿ(ಡಿ.13): ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2 ಸಾವಿರ ಮುಖಬೆಲೆಯ ಹೊಸ ನೋಟುಗಳು ಕೂಡ ಮುಂದಿನ 5 ವರ್ಷಗಳೊಳಗಾಗಿ ಅಮಾನ್ಯಗೊಳ್ಳಲಿದೆ ಎಂದು ಆರೆಸ್ಸೆಸ್ ಜೊತೆ ನಿಕಟ ಸಂಬಂಧ ಹೊಂದಿರುವ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಎಸ್ ಗುರುಮೂರ್ತಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಇನ್ನು ದೇಶದಲ್ಲಿ .500ರ ನೋಟುಗಳಷ್ಟೇ ಅಧಿಕ ಮುಖಬೆಲೆಯ ನೋಟುಗಳಾಗಿ ಉಳಿಯಲಿದೆ ಎಂದೂ ಅವರು ತಿಳಿಸಿದ್ದಾರೆ.
‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಗುರುಮೂರ್ತಿ ಅವರು ಈ ವಿಚಾರ ತಿಳಿಸಿದ್ದು, ಸರ್ಕಾರ ಮತ್ತು ಆರ್‌ಬಿಐನ ನೀತಿನಿಬಂಧನೆಗಳನ್ನು ತಾವೂ ಅರಿತಿರುವಂತೆ ಅವರು ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಗುರುಮೂರ್ತಿ ಅವರು ಆರೆಸ್ಸೆಸ್ ಬೆಂಬಲಿತ ವಿವೇಕಾನಂದ ಇಂಡಿಯಾ ಪ್ರತಿಷ್ಠಾನದ ಪ್ರಮುಖ ಸದಸ್ಯರೂ ಆಗಿದ್ದಾರೆ.
ಹೊಸ ನೋಟು ಇರಲ್ಲ: ‘‘.500, 1,000ದ ನೋಟುಗಳನ್ನು ಅಮಾನ್ಯಗೊಳಿಸಿದಾಗ, ಚಲಾವಣೆಯಿಂದ ವಾಪಸ್ ಪಡೆದ ನೋಟುಗಳ ಅಂತರವನ್ನು ತುಂಬಲಷ್ಟೇ 2 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು. ಹೀಗಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಈ ಹೊಸ ನೋಟನ್ನೂ ಅಮಾನ್ಯಗೊಳಿಸಲಾಗುವುದು. ಸಣ್ಣ ಮುಖಬೆಲೆಯ ನೋಟುಗಳತ್ತ ಮುಖಮಾಡುವುದು ಸರ್ಕಾರದ ಉದ್ದೇಶ. ಅದರಂತೆ, 500ರ ನೋಟು ಇನ್ನು ಅತಿ ಹೆಚ್ಚಿನ ಮುಖಬೆಲೆಯ ನೋಟು ಆಗಿರಲಿದೆ,” ಎಂದಿದ್ದಾರೆ ಗುರುಮೂರ್ತಿ.
ಆರ್ಥಿಕ ಪೋಖ್ರಾನ್: ‘‘ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ನಿರ್ಧಾರವು ಆರ್ಥಿಕ ಪೋಖ್ರಾನ್‌ಗೆ ಸಮ,” ಎಂದೂ ಅವರು ಬಣ್ಣಿಸಿದ್ದಾರೆ. ಯಾವಾಗ ಜನರಲ್ಲಿ ಸಾಕಷ್ಟುಹಣವಿರುತ್ತದೋ, ಅವರು ಅನಗತ್ಯವಾಗಿ ವೆಚ್ಚ ಮಾಡಲು ಶುರುಮಾಡುತ್ತಾರೆ. ಇದರಿಂದ ಬೇಜವಾಬ್ದಾರಿಯುತ ದುಂದುವೆಚ್ಚಕ್ಕೆ ಕಾರಣಲಾಗುತ್ತದೆ. ಈ ನಿಟ್ಟಿನಲ್ಲಿ, ನೋಟು ಅಮಾನ್ಯವು ಬದಲಾವಣೆ ತರ ಲಿದೆ. ಪೋಖ್ರಾನ್ ಪರೀಕ್ಷೆ ಅನಿರೀಕ್ಷಿತ ಬದಲಾವಣೆಯನ್ನು ಉಂಟು ಮಾಡಿದಂತೆ ಇದೂ ಮಾಡುತ್ತೆ ಎಂದಿದ್ದಾರೆ.