ರಾಷ್ಟ್ರೀಯ

ವಂಚನೆ ತಡೆಗೆ ಡೆಬಿಟ್ ಕಾರ್ಡ್ ಗೆ ಸ್ವಿಚ್ ಆನ್/ಆಫ್” ಆಯ್ಕೆ!

Pinterest LinkedIn Tumblr

ATM-debit-cardನವದೆಹಲಿ: ನಗದು ರಹಿತ ವಹಿವಾಟಿನ ಮೇಲೆ ಹ್ಯಾಕರ್ ಗಳ ದಾಳಿ ಭೀತಿ ಇರುವಂತೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ಡೆಬಿಟ್ ಕಾರ್ಡ್ ವಂಚನೆ ನಿಯಂತ್ರಿಸಲು ತನ್ನ ಎಸ್ ಬಿಐ ಕ್ವಿಕ್ ಅ್ಯಪ್ ನಲ್ಲಿ “ಎಟಿಎಂ ಕಾರ್ಡ್ ಸ್ವಿಚ್ ಆನ್ ಅಥವಾ ಆಫ್” ಎಂಬ ಭದ್ರತಾ ಕ್ರಮವೊಂದನ್ನು ಸಿದ್ಧಪಡಿಸಿದೆ.
ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ ನಗದು ರಹಿತ ವಹಿವಾಟು ಉತ್ತೇಜಿಸುತ್ತಿರುವಂತೆಯೇ ಕಾರ್ಡ್ ಹ್ಯಾಕರ್ ಗಳ ಕುರಿತು ಗ್ರಾಹಕರಿಗೆ ಭೀತಿ ಎದುರಾಗಿದೆ. ಆದರೆ ಇದೀಗ ಈ ಭೀತಿ ಹೋಗಲಾಡಿಸಲು ಎಸ್ ಬಿಐ ಪ್ರಯತ್ನಿಸಿದ್ದು, ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೂತನ ಭದ್ರತಾ ಕ್ರಮವನ್ನು ಪರಿಚಯಿಸಿದೆ. ಎಸ್ ಬಿಐ ಪರಿಚಯಿಸಿರುವ ಈ ನೂತನ ಕ್ರಮದ ಹೆಸರು “ಎಟಿಎಂ ಕಾರ್ಡ್ ಸ್ವಿಚ್ ಆನ್ ಅಥವಾ ಆಫ್” ಎಂದು. ಎಸ್ ಬಿಐ ನ ಈ ನೂತನ ಕ್ರಮ ಅದರ ಬ್ಯಾಂಕಿಂಗ್ ಅಪ್ಲಿಕೇಷನ್ “ಎಸ್ ಬಿಐ ಕ್ವಿಕ್” ನಲ್ಲಿ ಲಭ್ಯವಿದ್ದು, ಇದರಿಂದ ಡೆಬಿಟ್ ಕಾರ್ಡ್ ಮೇಲೆ ಗ್ರಾಹಕರು ಸಂಪೂರ್ಣ ಹಿಡಿತ ಹೊಂದಬಹುದಾಗಿದೆ.
ಅಂದರೆ ನೀವು ನಿಮ್ಮ ಡೆಬಿಟ್ ಕಾರ್ಡ್ ನ ವಿವಿಧ ಸೌಲಭ್ಯಗಳನ್ನು ನಿಮ್ಮ ಸ್ವ ಇಚ್ಛೆಯಿಂದ ಆನ್ ಹಾಗೂ ಆಫ್ (ಚಾಲನೆ ಅಥವಾ ರದ್ದು) ಮಾಡಬಹುದು. ಉದಾಹರಣೆಗೆ-ಈ ನೂತನ ಕ್ರಮದ ಮೂಲಕ ಕಾರ್ಡ್ ಗಿರುವ ವಿವಿಧ ಸೌಲಭ್ಯಗಳ ಪೈಕಿ ಒಂದಾಗಿರುವ ಶಾಪಿಂಗ್ ಸೌಲಭ್ಯವನ್ನು ಕಾರ್ಡ್ ಮಾಲೀಕ ಅಥವಾ ಸಂಬಂಧ ಪಟ್ಟ ಗ್ರಾಹಕ ಆನ್ ಅಥವಾ ಆಫ್ ಮಾಡಬಹುದು. ಆ ಮೂಲಕ ನಿರ್ಧಿಷ್ಟ ಗ್ರಾಹಕನನ್ನು ಹೊರತು ಪಡಿಸಿ ಬೇರಾವುದೇ ವ್ಯಕ್ತಿ ಕಾರ್ಡ್ ಬಳಕೆ ಮಾಡಲು ಕಷ್ಟವಾಗುತ್ತದೆ. ಯಾರೇ ಆಗಲಿ ಕಾರ್ಡ್ ಮಾಲೀಕನ ಅನುಮತಿ ಇಲ್ಲದೆ ಕಾರ್ಡ್ ನಿಂದ ಹಣ ತೆಗೆಯಲು ಇಲ್ಲವೇ ವ್ಯವಹಾರ ಮಾಡಲು ಸಾಧ್ಯವಿಲ್ಲ.
ಇನ್ನು ನೀವು ಈ ನೂತನ ಕ್ರಮದ ಮೂಲಕ ಕಾರ್ಡ್ ನ ಇ-ಕಾಮರ್ಸ್ ಸೌಲಭ್ಯವನ್ನು ರದ್ದು ಮಾಡಿದರೆ ಆ ಕಾರ್ಡ್ ನಿಂದ ಯಾವುದೇ ಆನ್ ಲೈನ್ ಪೇಮೆಂಟ್ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಯೋಜನೆಯ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ನ ವಿದೇಶಿ ಹಾಗೂ ದೇಶೀ ಬಳಕೆಯ ಮೇಲೂ ನೀವು ಸಂಪೂರ್ಣ ಹಿಡಿತ ಪಡೆಯಬಹುದು.
ಈ ಯೋಜನೆಯನ್ನು ಬಳಸಲು ನೀವು ಆ್ಯಪ್ ಡೌನ್ ಲೋಡ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಎಸ್ ಬಿಐ ಬ್ಯಾಂಕ್ ನೊಂದಿಗೆ ರಿಜಿಸ್ಟರ್ ಮಾಡಿಸಿಕೊಳ್ಳುವುದು ಅನಿವಾರ್ಯ. ಎಸ್ ಬಿಐ ನ ಈ “ಕ್ವಿಕ್ ಆ್ಯಪ್” ಅನ್ನು ಆ್ಯಂಡ್ರಾಯ್ಡ್, ವಿಂಡೋಸ್, IOS ಹಾಗೂ ಬ್ಲ್ಯಾಕ್ ಬೆರಿ ಮೊಬೈಲ್ ಗಳಲ್ಲಿ ಬಳಕೆ ಮಾಡಬಹುದಾಗಿದೆ.

Comments are closed.