ರಾಷ್ಟ್ರೀಯ

ಬ್ಲ್ಯಾಕ್ ವೈಟ್ ಮನಿ ದಂಧೆ: ಆರ್ ಬಿಐ ವಿಶೇಷ ಸಹಾಯಕ ಮೈಕಲ್ ಬಂಧನ; ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

Pinterest LinkedIn Tumblr

black-money

ಬೆಂಗಳೂರು: ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಸಹಾಯಕ ಅಧಿಕಾರಿಯನ್ನು ಬಂಧಿಸಲಾಗಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಆರ್ ಬಿಐ ವಿಶೇಷ ಸಹಾಯಕ ಕೆ ಮೈಕಲ್ ಎಂಬಾತನನ್ನು ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಬಂಧಿಸಿದ್ದು, ಮೈಕೆಲ್ ನೊಂದಿಗೆ ಮತ್ತಿಬ್ಬರು ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಪ್ರಸ್ತುತ ಬಂಧನಕ್ಕೀಡಾಗಿರುವ ಮೈಕಲ್ ಮತ್ತು ಆತನ ಸಹಚರರನ್ನು ಆರ್ ಬಿಐ ನ ವಿಶೇಷ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಸುಮಾರು 1.51 ಕೋಟಿ ರು. ಕಪ್ಪುಹಣವನ್ನು ಬಿಳಿಯಾಗಿಸಿದ ಆರೋಪದ ಮೇರೆಗೆ ಮೈಕಲ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಬಂಧಿತರಿಂದ ಒಟ್ಟು 17 ಲಕ್ಷ ರು.ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಬಂಧಿತರಿಂದ ಜಪ್ತಿ ಮಾಡಿದ ಹಣ ಜನರ ಹಣವೇ ಅಥವಾ ಬ್ಯಾಂಕಿನ ಹಣವೇ ಎಂಬುದರ ಕುರಿತು ಇನ್ನಷ್ಟೇ ತನಿಖೆಯಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಮೂಲಗಳ ಪ್ರಕಾರ ಬಂಧಿತ ಮೈಕಲ್ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಎಸ್ ಬಿಎಂ ಬ್ಯಾಂಕಿಗೆ ಸೇರಿದ ಸುಮಾರು 1.51 ಕೋಟಿ ರು.ಹಣವನ್ನು ಹಳೆಯ ನೋಟುಗಳನ್ನು ಪಡೆದು ಬದಲಾಯಿಸಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಕಪ್ಪುಹಣವನ್ನು ಬಿಳಿಯಾಗಿಸುವ ಕುರಿತು ಗ್ರಾಹಕ ಸೋಗಿನಲ್ಲಿ ತೆರಳಿದ್ದ 10 ಮಂದಿ ಸಿಬಿಐ ಅಧಿಕಾರಿಗಳು ಮೈಕಲ್ ನನ್ನು ಇಂದು ಬೆಳಗ್ಗೆ ಸಾಕ್ಷಿ ಸಮೇತ ಬಂಧಿಸಿದ್ದಾರೆ. ಬಂಧನಕ್ಕೀಡಾದ ಮೈಕಲ್ ನನ್ನು ಬೆಂಗಳೂರಿನ ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಸ್ ಸಿ ಜಯಚಂದ್ರ ಪ್ರಕರಣ; ಇಬ್ಬರು ಸಚಿವರಿಗೆ ನೋಟಿಸ್ ನೀಡಲು ಚಿಂತನೆ
ಇದೇ ವೇಳೆ ಈ ಹಿಂದೆ ತೆರಿಗೆ ಅಧಿಕಾರಿಗಳ ದಾಳಿ ವೇಳೆ ಅಪಾರ ಪ್ರಮಾಣದ ನಗದು ಹೊಂದಿದ್ದ ರಾಜ್ಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ಎಸ್ ಸಿ ಜಯಚಂದ್ರ ಅವರ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಇಬ್ಬರು ಸಚಿವರಿಗೆ ನೋಟಿಸ್ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಅಧಿಕಾರಿಗಳು 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇಂದು ಎಸ್ ಸಿ ಜಯಚಂದ್ರ ಅವರ ಬಾಮೈದ ಪ್ರಶಾಂತ್ ನನ್ನು ಸಹ ಬಂಧಿಸಿದ್ದಾರೆ. ಅಲ್ಲದೇ ಇದೇ ಪ್ರಕರಣ ಸಂಬಂಧ ಪ್ರಶಾಂತ್ ಜೊತೆಗೆ ವ್ಯವಹಾರ ಹೊಂದಿದ್ದ ವೇಣುಗೋಪಾಲ್, ಉಮೇಶ್, ರಹಮತ್, ರಾಘವೇಂದ್ರ, ಫೈನಾನ್ಶಿಯರ್ ಗಳಾದ ಸುಪ್ರೀತ್ ಶೆಟ್ಟಿ ಮತ್ತು ಮಂಚನಾಯಕನಹಳ್ಳಿ ತಾ.ಪಂ ಸದಸ್ಯ ಶೇಖರ್ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದರು.

Comments are closed.