ರಾಷ್ಟ್ರೀಯ

ನೋಟಿಗಾಗಿ ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧ!

Pinterest LinkedIn Tumblr

rakesh

ಆಗ್ರಾ: ನೋಟು ನಿಷೇಧ ಬಳಿಕ ದೇಶದಲ್ಲಿ ಉಲ್ಬಣವಾಗಿರುವ ನೋಟಿನ ಕೊರತೆ ಸಮಸ್ಯೆಯಿಂದಾಗಿ ನಿವೃತ್ತ ಯೋಧನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.

ಆಗ್ರಾ ಮೂಲದ ರಾಕೇಶ್ ಯಾದವ್ ಎಂಬ ಸಿಆರ್ ಪಿಎಫ್ ನ ನಿವೃತ್ತ ಯೋಧ ಭಾನುವಾರ ತಮ್ಮ ರಿವಾಲ್ವರ್ ನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬದ ಮೂಲಗಳ ಪ್ರಕಾರ ರಾಕೇಶ್ ಯಾದವ್ ಅವರ ಪುತ್ರಿ ಕೀರ್ತಿಯಾದವ್ ಅವರು ಅನಾರೋಗ್ಯಕ್ಕೀಡಾಗಿದ್ದು, ಆಕೆಯ ಚಿಕಿತ್ಸೆಗೆಂದು ಶುಕ್ರವಾರದಿಂದಲೇ ಹಣಕ್ಕಾಗಿ ವಿವಿಧ ಬ್ಯಾಂಕ್ ಗಳು ಹಾಗೂ ಎಟಿಎಂಗಳಿಗೆ ಅಲೆದಿದ್ದಾರೆ. ಆದರೆ ಯಾವುದೇ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ದೊರಯೆದೇ ಇದ್ದರಿಂದ ತೀವ್ರ ಹತಾಶೆಗೊಳಗಾಗಿದ್ದ ರಾಕೇಶ್ ಯಾದವ್ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ತಮ್ಮ ತಂದೆ ಸಾವಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರ ಪುತ್ರಿ ಕೀರ್ತಿ ಯಾದವ್ ಅವರು, ನಮ್ಮ ತಂದೆ ಕಳೆದ ಹಲವು ದಿನಗಳಿಂದ ಹಣಕ್ಕಾಗಿ ಬ್ಯಾಂಕ್ ಗಳಲ್ಲಿ ಸರತಿ ಸಾಲಲ್ಲಿ ನಿಂತಿದ್ದರು. ಆದರೆ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಹಣ ದೊರೆಯದೇ ಇದ್ದರಿಂದ ಆಕ್ರೋಶಗೊಂಡು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ ನೋಟು ನಿಷೇಧದ ಬಳಿಕ ಉಂಟಾಗಿರುವ ಹಣದ ಬಿಕ್ಕಟ್ಟಿಗೆ ಮತ್ತೊಂದು ಬಲಿಯಾಗಿದೆ. ಆದರೆ ಪ್ರಸ್ತುತ ದೇಶದ ಯಾವುದೇ ಪ್ರಮುಖ ಔಷಧಾಲಯ ಮತ್ತು ಆಸ್ಪತ್ರೆಗಳಲ್ಲಿ ಕಾರ್ಡ್ ಬಳಕೆ ಸಾಮಾನ್ಯವಾಗಿದ್ದು, ನಗದು ಬಳಕೆ ಅನಿವಾರ್ಯವೇನಿಲ್ಲ. ಹೀಗಿದ್ದೂ ಹಣ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ರಾಕೇಶ್ ಅವರು ಹತಾಶೆಗೊಳಗಾಗಿ ಆತುರದ ನಿರ್ಧಾರ ಕೈಗೊಂಡರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Comments are closed.